ಬೆಂಗಳೂರು : ಬೆಂಗಳೂರಲ್ಲಿ ATM ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂಪಾಯಿ ಹಣ ದರೋಡೆ ಪ್ರಕರಣದಲ್ಲಿ ಮತ್ತೆ ನಾಲ್ವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಹೈದರಾಬಾದ್‌ನ ಲಾಡ್ಜ್ವೊಂದರಲ್ಲಿದ್ದ ನವೀನ್, ನೆಲ್ಸನ್ ಹಾಗೂ ರವಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 70 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಒಟ್ಟು 7 ಜನರನ್ನು ಬಂಧಿಸಲಾಗಿದ್ದು ಇಲ್ಲಿಯವರೆಗೆ 6.45 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 19ರಂದು ಮಧ್ಯಾಹ್ನ ನಗರದ ಹೃದಯಭಾಗದಲ್ಲೇ ಆರೋಪಿಗಳು ದರೋಡೆ ನಡೆಸಿ ಪರಾರಿಯಾಗಿದ್ದರು. ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದ ಬೆಂಗಳೂರು ಪೊಲೀಸರು ಕೇವಲ ಮೂರೇ ದಿನದಲ್ಲಿ ಮೂವರನ್ನು ಬಂಧಿಸಿ 5.76 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಶಕ್ಕೆ ಪಡೆದ ಹಣದ ಮೊತ್ತ 6.45 ಕೋಟಿ ರೂಪಾಯಿ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ಟೇಬಲ್ ಸಾಥ್ ನೀಡಿರುವ ಸ್ಫೋಟಕ ಸತ್ಯ ಈಗಾಗಲೇ ಬಯಲಾಗಿದೆ. ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಸಿಎಂಎಸ್ ಕಂಪನಿ ಹಳೆ ಉದ್ಯೋಗಿ ಕ್ಸೇವಿಯರ್, ಸಿಎಂಎಸ್ ವಾಹನ ವಿಭಾಗದ ಮೇಲ್ವಿಚಾರಕ ಗೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.








