ಟೋಕಿಯೋ: ಜಪಾನ್‌ನಲ್ಲಿ ಸೋಮವಾರ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಬೆನ್ನಲ್ಲೇ ಕರಾವಳಿ ತೀರದ ಜನರಲ್ಲಿ ಆತಂಕ ಮನೆಮಾಡಿದ್ದು, ಜಪಾನ್ ಸರ್ಕಾರವು ಅಧಿಕೃತವಾಗಿ ಸುನಾಮಿ ಎಚ್ಚರಿಕೆಯನ್ನು ನೀಡಿದೆ.
ಸೋಮವಾರ ಜಪಾನ್‌ನ ಹಲವು ಭಾಗಗಳಲ್ಲಿ ಪ್ರಬಲ ಭೂಕಂಪನ ಅನುಭವವಾಗಿದೆ. ಕಟ್ಟಡಗಳು ನಡುಗಿದ ಪರಿಣಾಮ ಜನರು ಗಾಬರಿಯಿಂದ ಬೀದಿಗಿಳಿದು ಓಡಿದ್ದಾರೆ. ಜಪಾನ್‌ನ ಸಾರ್ವಜನಿಕ ಪ್ರಸಾರಕ ಸಂಸ್ಥೆ ‘ಎನ್‌ಹೆಚ್‌ಕೆ’ (NHK) ವರದಿಯ ಪ್ರಕಾರ, ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಕರಾವಳಿ ಪ್ರದೇಶದ ನಿವಾಸಿಗಳಿಗೆ ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭೂಕಂಪದ ತೀವ್ರತೆಗೆ ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಆತಂಕ ಸೃಷ್ಟಿಯಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಹಾನಿಯ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಮುದ್ರ ತೀರದ ಸಮೀಪ ಇರುವವರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.








