ಉಡುಪಿ : ಉಡುಪಿ ಮಾರುಕಟ್ಟೆಯಲ್ಲಿ ಇಂದು ಚೀನಾ ಬೆಳೆದಿರುವ ಬೆಳ್ಳುಳ್ಳಿ, ದೇಶಿಯ ಉತ್ಪನ್ನಕ್ಕೆ ಪರ್ಯಾಯವಾಗಿ ಮಾರಾಟವಾಗುತ್ತಿತ್ತು. ಇದನ್ನು ಅರಿತ ವರ್ತಕರು ನಗರಸಭೆಗೆ ದೂರು ನೀಡಿದ್ದು, ಸಗಟು ವ್ಯಾಪಾರದ ಮಳಿಗೆಯೊಂದರ ಮೇಲೆ ನಗರಸಭೆ ಆಯುಕ್ತರು ದಾಳಿ ನಡೆಸಿ, ಐದು ಕ್ವಿಂಟಲ್ ಚೀನಾ ಬೆಳ್ಳುಳ್ಳಿಯನ್ನು ಜಪ್ತಿ ಮಾಡಿದ್ದಾರೆ.
ಹೌದು ಎಲೆಕ್ಟ್ರಾನಿಕ್ ವಸ್ತುಗಳ ಅಗ್ಗದ ಬೆಲೆಯಲ್ಲಿ ಮಾರಾಟದಲ್ಲಿ ಚೀನಾ ಅಕ್ಕಪಕ್ಕದ ದೇಶಗಳಿಗೆ ಭಾರಿ ಹೊಡೆತವನ್ನು ನೀಡಿದೆ.ಆದರೆ ಇದೀಗ ಎಲೆಕ್ಟ್ರಾನಿಕ್ ವಸ್ತುಗಳ ಜೊತೆಗೆ ಅಡುಗೆಗೆ ಬಳಸುವ ಹಲವು ವಸ್ತುಗಳನ್ನು ಮಾರಾಟ ಹಾಗೂ ಸರಬರಾಜು ಮಾಡುವ ಮೂಲಕ ಭಾರತೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ.
ನಮ್ಮ ದೇಶದಲ್ಲಿ ಬೆಳೆಯುವ ಬೆಳ್ಳುಳ್ಳಿಗೂ, ಚೀನದಿಂದ ಬರುವ ಬೆಳ್ಳುಳ್ಳಿಗೂ, ರುಚಿ ವಾಸನೆ ಹಾಗೂ ದರದಲ್ಲು ಬಹಳ ವ್ಯತ್ಯಾಸವಿದೆ. ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆ.ಜಿ.ಗೆ 160 ರಿಂದ 320 ರೂ. ನಂತೆ ಮಾರಾಟವಾಗುತ್ತಿದೆ. ಆದರೆ, ಚೀನಾದ ಬೆಳ್ಳುಳ್ಳಿ ಕೇವಲ 50 ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿದೆ.
ಭಾರತವು ತನ್ನ ಆಮದನ್ನು 2014 ರಲ್ಲಿ ನಿಷೇಧಿಸಿದ ನಂತರವೂ ಚೀನಾ ಬೆಳ್ಳುಳ್ಳಿ ಮಾರಾಟ ಆಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಚೀನಾದ ಬೆಳ್ಳುಳ್ಳಿಯು ಎರಡನೇ ಶ್ರೇಣಿಯ ನಗರಗಳಾದ ಮಂಗಳೂರು, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಣ್ಣ ಪಟ್ಟಣ ನಗರಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.