ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು, ಆದರೆ ಇಂದು ಕೂಡ ಭಾರಿ ಮಳೆಯಿಂದಾಗಿ ಸಿಟಿ ರೌಂಡ್ ರದ್ದುಗೊಳಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್ಗೆ ತೆರಳಿದರು.
ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಂದ ಮಳೆ ಹಾನಿ ಪ್ರದೇಶಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಇಂದಿನ ಸಿಟಿ ರೌಂಡ್ಸ್ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ, ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ.
166 ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆದಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತೇವೆ. ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ನಾವು ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇವೆ. ವೈಟ್ ಫೀಲ್ಡ್ ನಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇಂದು ಡಿಕೆ ಶಿವಕುಮಾರ್ ಕೆಲ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ ನಾಡಿದ್ದು ನಾನು ಮತ್ತು ಕೆಲಸ ಸಚಿವರು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು