ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿನ 43 ಸಿ.ಇ.ಎನ್ ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆ (Cyber Crime Police Station) ಎಂದು ಮರುಪದನಾಮೀಕರಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ (1)ರ ಆದೇಶದಲ್ಲಿ ಬೆಂಗಳೂರು ನಗರದಲ್ಲಿ 08 CEN ಪೊಲೀಸ್ ಠಾಣೆಗಳನ್ನು ಸೃಜಿಸಿ, ಪ್ರತಿ ಠಾಣೆಗೆ 07 ಹುದ್ದೆಗಳಂತೆ ಒಟ್ಟು 56 ಹುದ್ದೆಗಳಿಗೆ ಮಂಜೂರಾತಿ ನೀಡಿ ಆದೇಶಿಸಲಾಗಿದೆ. ಪ್ರಸ್ತುತ ಹಂತಹಂತವಾಗಿ ಸೃಜಿಸಲ್ಪಟ್ಟಿರುವ ಒಟ್ಟು 43 ಸಿ.ಇ.ಎನ್. ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.
ಮೇಲೆ ಓದಲಾದ (2)ರ ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಸೈಬರ್ ಕಮಾಂಡ್ ಘಟಕ (Cyber Command Unit)ವನ್ನು ಸ್ಥಾಪಿಸಿ, ಸಿಐಡಿ ವಿಭಾಗದಲ್ಲಿನ ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ಘಟಕವನ್ನು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳೊಂದಿಗೆ ಸಿಐಡಿಯಿಂದ ಬೇರ್ಪಡಿಸಿ ಸೈಬರ್ ಕಮಾಂಡ್ ಘಟಕದ ವ್ಯಾಪ್ತಿಗೆ ಒಳಪಡಿಸಲಾಗಿದೆ ಮತ್ತು 43 ಸಿ.ಇ.ಎನ್. ಪೊಲೀಸ್ ಠಾಣೆಗಳು ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಘಟಕಕ್ಕೆ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ (3)ರ ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯದಲ್ಲಿ ಹೊಸದಾಗಿ “ಸೈಬರ್ ಅಪರಾಧ ತಡ ಘಟಕ” (Cyber Crimes Prevention Unit)ವನ್ನು ಸೃಜಿಸಿ ತಿದ್ದುಪಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 43 ಸಿ.ಇ.ಎನ್ (ಸೈಬರ್, ಎಕನಾಮಿಕ್ಸ್ & ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳಲ್ಲಿ ಕೆಳಕಂಡ ನಿಯಮ/ಅಧಿನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ವಹಿಸಲು ಸರ್ಕಾರದ ಅಧಿಸೂಚನೆಗಳನ್ವಯ ಅಧಿಕಾರ ನೀಡಲಾಗಿರುತ್ತದೆಂದು ತಿಳಿಸಿರುತ್ತಾರೆ.