ಮೈಸೂರು : ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ಕಾಡಿನಿಂದ ನಾಡಿಗೆ ಬರೋಬ್ಬರಿ 21 ಹುಲಿಗಳು ಎಂಟ್ರಿ ಕೊಟ್ಟಿವೆ ಎಂದು ದೃಢಪಟ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಹುಲಿ ದಾಳಿಗೆ ಕೆಲ ದಿನಗಳ ಹಿಂದೆ ಮೂವರು ರೈತರು ಬಲಿಯಾಗಿದ್ದರು. ಈ ಘಟನೆಗಳ ಬೆನ್ನಲ್ಲೇ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸಿ ಉಪಟಳ ನೀಡುತ್ತಿದ್ದ ಒಂದು ಹುಲಿಯನ್ನು ಸೆರೆಹಿಡಿದಿತ್ತು. ಆದರೆ ಎಚ್.ಡಿ. ಕೋಟೆ, ಸರಗೂರು ಮತ್ತು ನಂಜನಗೂಡು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಟ್ಟು 21 ಹುಲಿಗಳು ಸಂಚರಿಸುತ್ತಿವೆ ಎಂದು ಡಿಸಿಎಫ್ ಪರಮೇಶ್ ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ 26 ಹುಲಿಗಳು ಕಾಡಿನಿಂದ ನಾಡಿನತ್ತ ಬಂದಿದ್ದವು. ಅವುಗಳಲ್ಲಿ 5 ಹುಲಿಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಆದರೆ, ಇನ್ನೂ 21 ಹುಲಿಗಳು ನಾಡಿನಲ್ಲೇ ಓಡಾಡುತ್ತಿದ್ದು, ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಹುಲಿ ದಾಳಿ ಭೀತಿ ರೈತರಲ್ಲಿ ಮನೆ ಮಾಡಿದ್ದು, ಜಮೀನಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ರೈತರಿಗೆ 10 ಸಾವಿರ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. ರೈತರು ತಲೆ ಹಿಂದೆ ಮಾಸ್ಕ್ ಧರಿಸಬೇಕು. ಕುಳಿತುಕೊಂಡು ಕೆಲಸ ಮಾಡುವಾಗ ಹುಲಿಗಳು ದಾಳಿ ನಡೆಸುತ್ತದೆ. ಆದ್ದರಿಂದ ರೈತರು ಮಾನವ ಮಾಸ್ಕ್ ಗಳನ್ನು ಹಾಕಿಕೊಳ್ಳಬೇಕು ಎಂದು ಡಿಸಿಎಫ್ ಪರಮೇಶ್ ಹೇಳಿದ್ದಾರೆ.








