ಗದಗ : ಗದಗದಲ್ಲಿ ಇಂದು ಘೋರ ದುರಂತ ಒಂದು ಸಂಭವಿಸಿದ್ದು, ನೀರಿನ ಟ್ಯಾಂಕರ್ ಒಂದು 2 ವರ್ಷದ ಮಗುವಿನ ಮೇಲೆ ಹರಿದ ಪರಿಣಾಮ, ಮಗು ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ, ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಮೃತ ಮಗುವನ್ನು ರೀದಾ ಸೊರಟೂರು (2) ಎಂದು ತಿಳಿದುಬಂದಿದೆ. ಮೃತ ಮಗುವಿನ ಸಬಂಧಿ ಮಹಿಳೆ ಸ್ಕೂಟಿ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರುಗಡೆ ನೀರಿನ ಟ್ಯಾಂಕರ್ ಬಂದಿದೆ. ಈ ವೇಳೆ ಸ್ಕೂಟಿಯನ್ನು ಪಕ್ಕಕ್ಕೆ ನಿಲ್ಲಿಸಿದ್ದಾಗ, ಆಯತಪ್ಪಿ ಮಗು ಪಕ್ಕಕ್ಕೆ ವಾಲಿದೆ. ಈ ವೇಳೆ ಸಡನ್ ಆಗಿ ಬಂದ ಟ್ಯಾಂಕರ್ ಮಗುವಿನ ಮೇಲೆ ಹರಿದಿದೆ. ಮಗು ಸ್ಥಳದಲ್ಲಿ ಸಾವನ್ನಪ್ಪಿದೆ.ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೀರಿನ ಟ್ಯಾಂಕರ್ ನ ಹಿಂಬದಿ ಚಕ್ರಕ್ಕೆ ಮಗುವಿನ ತಲೆಬುರುಡೆ ಸಿಕ್ಕು ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮಗು ಸಾವನ್ನಪ್ಪಿದೆ.ಕಣ್ಣೆದುರಿಗೆ ತನ್ನ ಕಂದಮ್ಮ ಬಲಿಯಾದ ದೃಶ್ಯ ನೋಡಿದ ಬೈಕ್ ಚಲಾಯಿಸುತ್ತಿದ್ದ ಮಗುವಿನ ಸಂಬಂಧಿ ಮಗುವನ್ನ ಎತ್ತಿಕೊಂಡು ಗೋಳಾಟ ನಡೆಸಿದ್ದಾಳೆ.ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.