ಕಲಬುರ್ಗಿ : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದು ಮನೆಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಇದೀಗ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೀಕಾರ್ ಹೊಸ ಬಾಂಬ್ ಸಿಡಿಸಿದ್ದು, ಈ ಒಂದು ಪ್ರಕರಣದಲ್ಲಿ 10 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಹೊಸ ಬಾಂಬ್ ನಡೆಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ 10 ಕೋಟಿ ಅವ್ಯವಹಾರವಾಗಿದ್ದು, ಇದಕ್ಕೆಲ್ಲ ಅಫಜಲಪುರ ತಾಲ್ಲೂಕಿನ ಬಳುಂಡಗಿ ಗ್ರಾಮ ಸರ್ಕಾರಿ ನೌಕರನೊಬ್ಬ ಕಿಂಗ್‌ಪಿನ್ ಆಗಿದ್ದಾನೆ. ಈತ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಚಿವ ಜಮೀರ್ ಅಹ್ಮದ್‌ರ ಆಪ್ತ ಎಂದು ಹೇಳಿಕೊಂಡು, ಹಣದ ವ್ಯವಹಾರ ಮಾಡುತ್ತಿದ್ದಾರೆ.ಆತನನ್ನು ಬಂಧಿಸಿ, ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಮತ್ತು ಕೆಆರ್ ಐಡಿಎಲ್ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ. ಗುತ್ತಿಗೆದಾರರು ಶಾಸಕರ ಸುಪುತ್ರ ಅರುಣಕುಮಾರ ಪಾಟೀಲ್ ಅವರಿಗೆ ಕಮಿಷನ್ ಕೊಡದಿದ್ದರೆ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಅಡೆತಡೆ ಮಾಡುವುದು ಅಥವಾ ಅವರ ಬೆಂಬಲಿಗರನ್ನು ಬಿಟ್ಟು ಕಾಮಗಾರಿ ನಿಲ್ಲಿಸುವುದು, ಮತ್ತೆ ಕಮಿಷನ್ ಬಂದ ಬಳಿಕವೇ ಕಾಮಗಾರಿ ಪುನರಾರಂಭ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಸಮಗ್ರವಾಗಿ ದಾಖಲೆ ಸಮೇತ ರಾಜ್ಯಪಾಲರಿಗೆ ದೂರು ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.
ಅಫಜಲಪುರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 3 ಸಾವಿರ ಮನೆಗಳು ಹೆಚ್ಚುವರಿಯಾಗಿ ಮಂಜೂರಾಗಿವೆ. ಆದರೆ ಶಾಸಕರ ಕೆಲ ಬೆಂಬಲಿಗರು ಪ್ರತಿ ಮನೆಗೆ 25ರಿಂದ 30 ಸಾವಿರವರೆಗೆ ಹಣ ಪಡೆದು, ಹಂಚಿಕೆ ಮಾಡುತ್ತಿದ್ದಾರೆ. ಅಂದಾಜು 10 ಕೋಟಿಗೂ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡಿದ್ದಾರೆ. ಅದರಲ್ಲಿ ಈ ನೌಕರನೇ ಕಿಂಗ್‌ಪಿನ್ ಆಗಿದ್ದು, ತಾಲ್ಲೂಕಿನ ಬಡವರಿಂದ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದ್ದಾನೆ ಎಂದು 6 ತಿಂಗಳ ಹಿಂದೆಯೇ ಹೇಳಿದ್ದೆ. ಆದರೆ ನಾನು ಅಸೂಯೆಯಿಂದ ಹೀಗೆ ಹೇಳುತ್ತಿದ್ದೇನೆ ಎಂದರು. ಆದರೆ ಈಗ ಅವರ ಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರ ಹೊರ ಬಿದ್ದಿದೆ ಎಂದರು.