ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 8 ರಂದು ನಿಗದಿಯಾಗಿದ್ದ 402 ಪಿ ಎಸ್ ಐ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಇದೀಗ ಮುಂದೂಡಲಾಗಿದೆ. ಲಿಖಿತ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಅಲ್ಲದೆ, ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.
ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಒಟ್ಟು ಎರಡು ರೀತಿಯ ಪ್ರಶ್ನೆ ಪತ್ರಿಕೆಗಳು ಇರಲಿವೆ. ಮೊದಲ ಪತ್ರಿಕೆ ಪ್ರಬಂಧ, ಸಾರಂಶ, ಭಾಷಾಂತರ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎರಡನೇ ಪತ್ರಿಕೆಯು ವಸ್ತುನಿಷ್ಟ ಮಾದರಿಯದಾಗಿದ್ದು, ಬಹುವಿಧ ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಎರಡೂ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಇರಲಿದೆ.
2021ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಹುದ್ದೆಗಳು ಇವಾಗಿದ್ದು, ಮೇ 8 ರಂದು ಲಿಖಿತ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಈ ವೇಳಾಪಟ್ಟಿಗೆ ಯಾವುದೇ ಆಕ್ಷೇಪಣೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗದಿದ್ದಲ್ಲಿ ಇದೇ ದಿನಾಂಕದಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದ್ದು ಶೀಘ್ರದಲ್ಲಿ ಅಧಿಕೃತ ದಿನಾಂಕವನ್ನು ವೆಬ್ಸೈಟ್ನಲ್ಲಿ ತಿಳಿಸಲಾಗುತ್ತದೆ .