ಬಳ್ಳಾರಿ : ರಾಜ್ಯದಲ್ಲಿ ಇದೀಗ ಹಕ್ಕಿಜ್ವರದಿಂದ ಜನರು ಭೀತಿಗೆ ಒಳಗಾಗಿದ್ದು ಇದೀಗ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ಒಂದೇ ವಾರದಲ್ಲಿ 8 ಸಾವಿರ ಕೋಳಿಗಳು ಮೃತಪಟ್ಟಿವೆ.
ಹೌದು ಕಳೆದ ಒಂದು ವಾರದಲ್ಲಿ ಒಂದೇ ಕೋಳಿ ಫಾರಂನಲ್ಲಿ ಸುಮಾರು 8,000ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ್ದು ಹಕ್ಕಿಜ್ವರದಿಂದ ಸಾವನ್ನಪ್ಪಿರಬಹುದು ಎಂದು ಇದೀಗ ಶಂಕೆ ವ್ಯಕ್ತಪಡಿಸಲಾಗಿದೆ.ರವಿ ಎಂಬವರಿಗೆ ಸೇರಿದ ಫಾರಂನಲ್ಲಿ ಮೊದಲು 15 ಸಾವಿರ ಕೋಳಿಗಳಿದ್ದವು. ಈವರೆಗೆ 8 ಸಾವಿರ ಕೋಳಿಗಳು ಮೃತಪಟ್ಟಿವೆ.
ಇದೀಗ 7 ಸಾವಿರ ಕೋಳಿಗಳು ಮಾತ್ರ ಉಳಿದಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆಗಳಿವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟ ಕೋಳಿಗಳ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
ಅದನ್ನು ಭೋಪಾಲ್ನಲ್ಲಿರುವ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ರವಾನಿಸಿ ಪರೀಕ್ಷೆ ಮಾಡಿಸಲಾಗುತ್ತದೆ. ಮಂಗಳವಾರದ ವೇಳೆಗೆ ವರದಿ ಬರಬಹುದು. ಹಕ್ಕಿ ಜ್ವರ ಇರುವುದು ದೃಢಪಟ್ಟರೆ, ಉಳಿದ ಕೋಳಿಗಳನ್ನೂ ವಧೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.