ತುಮಕೂರು : ಹೊಸ ವರ್ಷದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಅಡುಗೆ ತಯಾರಿಸುವ ವೇಳೆ ಕುಕ್ಕರ್ ಸ್ಫೋಟಗೊಂಡು ಇಬ್ಬರು ಅಡುಗೆ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಸರಕಾರಿ ಶಾಲೆಯಲ್ಲಿ ನಡೆದಿದೆ.
ಪುರವರ ಸರಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿ ಹೊಸ ವರ್ಷದ ಪ್ರಯುಕ್ತ ಶಾಲಾ ಮಕ್ಕಳಿಗೆ ಟೊಮೆಟೊ ಬಾತ್ ಹಾಗೂ ಹೆಸರುಬೇಳೆ ಪಾಯಸ ಸಿದ್ಧಪಡಿಸುವ ವೇಳೆ ಕುಕ್ಕರ್ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಅಡುಗೆ ಸಿಬ್ಬಂದಿ ಮೇಲೆ ನೀರು ಹಾಗೂ ಬೇಳೆ ಸಿಡಿದು ಉಮಾದೇವಿ ಗಂಭೀರಗೊಂಡಿದ್ದಾರೆ. ಸಹಾಯಕಿ ಜಯಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗ್ಯಾಸ್ ಸಿಲಿಂಡರ ಆಫ್ ಮಾಡಿ ಕುಕ್ಕರ್ ವಿಷಲ್ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.ತಕ್ಷಣ ಗಾಯಾಳನ್ನು ಗೊಂದಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.