ಬೆಳಗಾವಿ : ಇತಿಗೆ ಕಲಬುರ್ಗಿಯ ಸಂಸದ ಉಮೇಶ್ ಜಾಧವ್ ಅವರ ಪರಮಾಪ್ತ ಗಿರೀಶ್ ಚಕ್ರ ಹತ್ಯೆ ಮಾಸುವ ಮುನ್ನವೇ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪರಮಾಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೌದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ (58) ಎಂಬವರನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮೃತ ಅಣ್ಣಪ್ಪ ಬಸಪ್ಪ ನಿಂಬಾಳ ಅವರು ಖೀಳೆಗಾಂವ್ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು ಎಂದು ಹೇಳಲಾಗುತ್ತಿದ್ದು, ಇದೀಗ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.