ಅಯೋಧ್ಯಾ: “ಶ್ರೀರಾಮನ ಹಾದಿ ಮತ್ತು ಭಕ್ತಿಯ ಹಾದಿ ಎರಡೂ ಒಂದೇ. ಪ್ರಭು ಶ್ರೀರಾಮನಿಗೆ ತಲೆಬಾಗಿ ನಮಿಸುವುದು ಎಂದರೆ ಅದು ಸಾಕ್ಷಾತ್ ಭಾರತ ಮಾತೆಗೆ ಗೌರವ ಸಲ್ಲಿಸಿದಂತೆ,” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಮಿಕವಾಗಿ ನುಡಿದರು.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ 150 ಕೆಜಿ ತೂಕದ ಚಿನ್ನ ಲೇಪಿತ ‘ಶ್ರೀರಾಮ ಯಂತ್ರ’ ಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
“ನಮಾಮಿ ರಾಮಂ ರಘುವಂಶ ನಾಥಂ ಎಂದು ಹೇಳುವ ಹೃದಯ ಮತ್ತು ನಮ್ಮ ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡುವ ಹೃದಯ ಎರಡೂ ಒಂದೇ. ಭಕ್ತಿ ಮತ್ತು ದೇಶಪ್ರೇಮ ಇಲ್ಲಿ ಸಮಾಗಮಗೊಂಡಿವೆ,” ಎಂದು ಅವರು ಅಭಿಪ್ರಾಯಪಟ್ಟರು.
2047ರ ವೇಳೆಗೆ ಭಾರತವು ‘ವಿಕಸಿತ ಭಾರತ’ವಾಗುವ ಗುರಿ ಹೊಂದಿದೆ. ಸಮಾನತೆ, ಘನತೆ ಮತ್ತು ಸಾಮಾಜಿಕ ಸಾಮರಸ್ಯದ ‘ರಾಮರಾಜ್ಯ’ದ ಆದರ್ಶಗಳು ನಮ್ಮ ಈ ಗುರಿ ತಲುಪಲು ದಾರಿದೀಪವಾಗಲಿವೆ ಎಂದು ಅವರು ತಿಳಿಸಿದರು.
ಭಾರತದ ಮೂಲ ಸಂವಿಧಾನದ ಪ್ರತಿಗಳಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳುವ ಚಿತ್ರವಿರುವುದನ್ನು ಸ್ಮರಿಸಿದ ರಾಷ್ಟ್ರಪತಿಗಳು, ಇದು ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯ ನಡುವಿನ ಬೆಸುಗೆಯನ್ನು ತೋರಿಸುತ್ತದೆ ಎಂದರು.
ರಾಮಮಂದಿರದ ಭೂಮಿಪೂಜೆ, ಪ್ರಾಣ ಪ್ರತಿಷ್ಠಾಪನೆ ಮತ್ತು ಧರ್ಮಧ್ವಜಾರೋಹಣದಂತಹ ಘಟನೆಗಳನ್ನು ಭಾರತದ ಇತಿಹಾಸದ ‘ಸುವರ್ಣ ಅಧ್ಯಾಯಗಳು’ ಎಂದು ಅವರು ಬಣ್ಣಿಸಿದರು.








