ಕಲಬುರಗಿ: ರಾಜ್ಯದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಕಲಬುರ್ಗಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದ್ದು, ಪೋಷಕರು, ವಿದ್ಯಾರ್ಥಿಗಳು ಕೆಲ ಕಾಲ ಆತಂಕಕ್ಕೆ ದೂಡುವಂತೆ ಮಾಡಿತ್ತು.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ- ಮೇಲ್ ಬಂದಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು ಯಾವುದೇ ಬಾಂಬ್ ಅಥವಾ ಸ್ಪೋಟಕ ವಸ್ತು ಕಂಡು ಬಂದಿಲ್ಲ. ಹಾಗಾಗಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹೊಸ ಜೇವರ್ಗಿ ರಸ್ತೆಯ ಮಾರ್ಗದಲ್ಲಿರುವ ಖಾಸಗಿ ಶಾಲೆಯ ಮೇಲ್ ಐಡಿಗೆ ಇಂದು ಮೇಲ್ ಬಂದಿದ್ದು, ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ನಗರದ ಪೊಲೀಸರು, ಶಾಲೆಗೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ದೊಂದಿಗೆ ದೌಡಾಯಿಸಿ ತಕ್ಷಣ ಶಾಲೆಯಿಂದ ಮಕ್ಕಳನ್ನು ಹೊರಗಡೆ ಕಳಿಸಿದರು. ಶಾಲೆಯ ಪ್ರತಿಯೊಂದು ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಯಾವುದೇ ಬಾಂಬ್ ಅಥವಾ ಸ್ಪೋಟದ ವಸ್ತು ಕಂಡುಬಂದಿರುವುದಿಲ್ಲ.
ಶಾಲೆಯ ಅಧಿಕೃತ ಮೇಲ್ ಐಡಿಗೆ ಬಂದಿರುವ ಮೇಲ್ ನಲ್ಲಿರುವ ಭಾಷೆ ತಮಿಳು ಭಾಷೆಯಾಗಿದ್ದು, ಪೊಲೀಸರು ತಮಿಳು ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡಿ ನೋಡಿದಾಗ ಕಲಬುರಗಿ ಯ ಬಗ್ಗೆಯಾಗಲೀ ಅಥವಾ ಶಾಲೆಯ ಬಗ್ಗೆಯಾಗಲೀ ಬರೆಯಲಾಗಿಲ್ಲ. ಹಾಗಾಗಿ, ಮೇಲ್ ನಲ್ಲಿರುವ ವಿಷಯ ಕಲಬುರಗಿ ಗೆ ಸಂಬಂಧಿಸಿರದ ಕಾರಣ ಇದೊಂದು ಹುಸಿ ಬಾಂಬ್ ಮೇಲ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹುಸಿ ಬಾಂಬ್ ಮೇಲ್ ಎಂದು ಪರಿಗಣಿಸಿದರೂ ಕೂಡಾ ನಗರದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ, ನಗರದ ಸಾರ್ವಜನಿಕರು, ಪಾಲಕ- ಪೋಷಕರು ಹಾಗೂ ವಿದ್ಯಾರ್ಥಿಗಳು ಯಾವುದೇ ಆತಂಕ ಹಾಗೂ ಉದ್ವೇಗಕ್ಕೊಳಗಾಗಬಾರದು ಎಂದು ಕೋರುತ್ತೇನೆ ಹಾಗೂ ನಗರದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.