ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿದ್ದ ಆರೋಪದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ವ್ಯಕ್ತಿಯು ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದ. ಈ ಸಂಬಂಧ ಪ್ರಯಾಣಿಕ ರಾಜೇಶ್‌ಕುಮಾರ್ ಬೇನಿವಾಲ್ ವಿರುದ್ಧ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಆರೋಪಿ ರಾಜೇಶ್‌ಕುಮಾರ್ ಬೇನಿವಾಲ್ ನನ್ನು ಬಂಧಿಸಲಾಗಿದೆ.
ಪ್ರಯಾಣಿಕರು ಬ್ಯಾಗ್‌ಗಳನ್ನು ತಪಾಸಣೆಗಾಗಿ ಏರ್‌ಲೈನ್‌ನ ಚೆಕ್-ಇನ್ ಕೌಂಟರ್‌ನಲ್ಲಿ ಹಸ್ತಾಂತರಿಸುತ್ತಿದ್ದಾಗ ಬೇನಿವಾಲ್ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಗಟ್ಟಿಯಾಗಿ ಹೇಳಿದ್ದಾನೆ. ವಿಮಾನಯಾನ ಸಿಬ್ಬಂದಿ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.