ಬೆಂಗಳೂರು : ಬೆಂಗಳೂರಿನಲ್ಲಿ ವಾರದ ರಜೆಯನ್ನು ಹೊರತು ಮಾಡಿಸಿ ವಿಶೇಷ ರಜೆ ತೆಗೆದುಕೊಳ್ಳದೆ ಒಂದು ತಿಂಗಳು ಪೂರ್ತಿ ಕಾರ್ಯ ನಿರ್ವಹಿಸುವ ಚಾಲಕರಿಗೆ ಬಿಎಂಟಿಸಿ ಮಾಸಿಕವಾಗಿ ವಿಶೇಷ ರಜೆ ಭತ್ಯೆಯಾಗಿ 500 ರೂ. ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಚಾಲನಾ ಸಿಬ್ಬಂದಿ ಗೈರಿನಿಂದ ಸಮರ್ಪಕವಾಗಿ ಬಸ್ ಸೇವೆ ನೀಡಲು ಆಗುತ್ತಿರುವ ಸಮಸ್ಯೆ ನಿವಾರಿಸಲು ವಾರದ ರಜೆ ಹೊರತುಪಡಿಸಿ ಬೇರೆ ರಜೆಯನ್ನು ತೆಗೆದುಕೊಳ್ಳದೆ ಕೆಲಸ ಮಾಡುವ ಚಾಲನಾ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.
ಬಿಎಂಟಿಸಿಯ ಚಾಲನಾ ಸಿಬ್ಬಂದಿ ಪೈಕಿ ಪ್ರತಿದಿನ ಶೇಕಡ 6.8 ರಷ್ಟು ಸಿಬ್ಬಂದಿ ದೈನಂದಿನ ಅಥವಾ ಧೀರ್ಘಾವಧಿ ರಜೆಯಲ್ಲಿರುತ್ತಾರೆ. ಚಾಲನಾ ಸಿಬ್ಬಂದಿ ಪದೇಪದೆ ರಜೆ ಪಡೆಯುವು ದರಿಂದಾಗಿ ಬಿಎಂಟಿಸಿ ಸಮರ್ಪಕವಾಗಿ ಬಸ್ ಸೇವೆ ನೀಡಲಾಗುತ್ತಿಲ್ಲ. ನಿಗಮದ ಅಂಕಿ ಅಂಶದ ಪ್ರಕಾರ ಚಾಲನಾ ಸಿಬ್ಬಂದಿ ಗೈರಿನಿಂದ 2023ರ ಏಪ್ರಿಲ್‌ನಿಂದ 2023ರ ಅಕ್ಟೋಬರ್ ವರೆಗೆ 44.27 ಲಕ್ಷ ಅನುಸೂಚಿ (ಶೆಡ್ಯೂಲ್) ರದ್ದಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಲು ಚಾಲನಾ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಲು ಮುಂದಾಗಿದೆ.
ಬಿಎಂಟಿಸಿಯ ನೂತನ ಆದೇಶದಂತೆ ತಿಂಗಳಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ ದಿನಗಳ ಕಾಲ ರಜೆ ಕರ್ತವ್ಯಕ್ಕೆ ಹಾಜರಾಗುವ, ಆ ತಿಂಗಳು ಯಾವುದೇ ರೀತಿಯ ಶಿಸ್ತು ಕ್ರಮಕ್ಕೆ ಒಳಗಾಗದ ಚಾಲನಾ ಸಿಬ್ಬಂದಿಗೆ ಮಾಸಿಕ ₹500 ವಿಶೇಷ ಭತ್ಯೆಯನ್ನು ನೀಡಲಾಗುವುದು. ಈ ಕುರಿತಂತೆ ಪ್ರತಿ ತಿಂಗಳ ವೇತನಕ್ಕೂ ಮುನ್ನ ರಜೆ ರಹಿತ ಚಾಲಕರ ಘಟಕವಾರು ಪಟ್ಟಿಯನ್ನು ವಲಯದ ಅಧಿಕಾರಿಗಳು ಮುಖ್ಯ ವ್ಯವಸ್ಥಾಪಕರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅದನ್ನು ಆಧರಿಸಿ ರಜೆ ರಹಿತ ಚಾಲಕರ ವೇತನಕ್ಕೆ ವಿಶೇಷ ಭತ್ಯೆ ಮೊತ್ತವನ್ನು ನೀಡಲಾಗುತ್ತದೆ.