ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ.47ರಷ್ಟು ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದರು. ಈ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರವನ್ನು ಎಲ್ಲಿ ಇಳಿಸಲು ಸಾಧ್ಯವಿದೆಯೋ ಅಲ್ಲಿ ಇಳಿಸುವುದಾಗಿ ಬಿ ಎಂ ಆರ್ ಸಿ ಎಲ್ ಎಂಡಿ ಮಹೇಶ್ವರ ರಾವ್ ಅವರು ತಿಳಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ಒತ್ತಡಕ್ಕೆ ಮಣಿದು ಶೀಘ್ರವೇ ನಮ್ಮ ಮೆಟ್ರೋ ಪ್ರಯಾಣದ ದರವನ್ನು ಇಳಿಕೆ ಮಾಡುವಂತ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ದರ ಏರಿಕೆ ಸಂಬಂಧ ಕಳೆದ ಮೂರು ದಿನಗಳ ಹಿಂದೆ ಬೋರ್ಡ್ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ದರ ಏರಿಕೆಯ ನಿರ್ಧಾರವನ್ನು ಮಾಡಲಾಗಿತ್ತು. ಆದರೇ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದರ ಇಳಿಕೆ ಮಾಡಲು ಎಲ್ಲಿ ಸಾಧ್ಯವಿದೆಯೋ ಅಲ್ಲಿ ಮಾಡುತ್ತೇವೆ ಎಂದರು.
ಮೆಟ್ರೋ ಪ್ರಯಾಣದ ದರ ಏರಿಕೆ ನಂತ್ರ ಮಾಧ್ಯಮಗಳು, ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ. ಈ ಜನಾಭಿಪ್ರಾಯದ ಮೇಲೆ ಮೆಟ್ರೋ ದರ ಇಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ತಿಳಿಸಿದರು.
ಮೆಟ್ರೋದಲ್ಲಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿದೆ. ಮೆಟ್ರೋ ದರದಲ್ಲಿ ಶೇ.45 ರಿಂದ 50ರಷ್ಟು ಹೆಚ್ಚಳವಾದ ಕಡೆಯಲ್ಲಿ ಇಳಿಕೆ ಮಾಡಲಾಗುತ್ತದೆ ಎಂಬುದಾಗಿ ಪ್ರಕಟಿಸಿದರು.