ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಿಸಿದ್ದು, ಏಪ್ರಿಲ್ ತಿಂಗಳಲ್ಲಿ ಹಿಂದೆಂದೂ ದಾಖಲಾಗದ ಮಟ್ಟದ ಮಳೆ ಸುರಿಯುವ ಮೂಲಕ 15 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಬುಧವಾರ (ಏಪ್ರಿಲ್ 29, 2026) ಸಂಜೆ ಸುರಿದ ಧಾರಾಕಾರ ಮಳೆಯು 2011ರಲ್ಲಿ ದಾಖಲಾಗಿದ್ದ ಗರಿಷ್ಠ ಮಳೆಯ ದಾಖಲೆಯನ್ನು ಮುರಿದಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೀಗಿದೆ:
ಹೊಸ ದಾಖಲೆ: ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 111.5 ಮಿ.ಮೀ ಮಳೆಯಾಗಿದ್ದು, ಇದು ಏಪ್ರಿಲ್ ತಿಂಗಳ ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.
ಇದಕ್ಕೂ ಮೊದಲು 2011ರ ಏಪ್ರಿಲ್‌ನಲ್ಲಿ 108.6 ಮಿ.ಮೀ ಮಳೆಯಾಗಿದ್ದು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು.
ಕೇವಲ 30 ನಿಮಿಷದಲ್ಲಿ ಆರ್ಭಟ: ಒಟ್ಟು ಸುರಿದ ಮಳೆಯಲ್ಲಿ ಸುಮಾರು 78 ಮಿ.ಮೀ ನಷ್ಟು ಮಳೆ ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಸುರಿದಿರುವುದು ಈ ಬಾರಿಯ ಮಳೆಯ ತೀವ್ರತೆಗೆ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ಸರಾಸರಿ ಮಳೆ 61.7 ಮಿ.ಮೀ ಇರುತ್ತದೆ. ಆದರೆ ಈ ಬಾರಿ ಒಂದೇ ದಿನದಲ್ಲಿ ತಿಂಗಳ ಸರಾಸರಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಮಳೆಯಾಗಿದೆ.








