ಶಿವಮೊಗ್ಗ : ಇಂದು ಜಿಲ್ಲೆಯ ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಮತ್ತು ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಬ್ಲಾಕ್‌ಮೈಲ್ ಮಾಡುತ್ತಿರುವವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಹೆಸರಿನಲ್ಲಿ ಪತ್ರಕರ್ತರು ಎಂದು ಹೇಳಿಕೊಂಡು ತಿರುಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ತಮ್ಮದು ಯೂಟ್ಯೂಬ್ ಚಾನಲ್ ಇದೆ ಎಂದು ಪತ್ರಕರ್ತರ ಸಂಘದ ಹೆಸರು ಹೇಳಿಕೊಂಡು ಬ್ಲಾಕ್‌ಮೈಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಕೊಡದಿದ್ದರೇ ಬೆದರಿಸುವಂತಹ ಕೃತ್ಯಗಳು ನಡೆಯುತ್ತಿರುವುದು ಸಂಘದ ಗಮನಕ್ಕೆ ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅದರಲ್ಲೂ ಸಾಗರ ತಾಲ್ಲೂಕಿನ ಲೇಔಟ್ ಮಾಲೀಕರಿಗೆ, ಉದ್ಯಮಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಶಿಕ್ಷಕರಿಗೆ ಯೂಟ್ಯೂಬ್ ಚಾನಲ್‌ನಲ್ಲಿ ನಿಮ್ಮ ವಿರುದ್ದ ಸುದ್ದಿ ಪ್ರಕಟಿಸುತ್ತೇವೆ ಎಂದು ಹೆದರಿಸಿ ಕೆಲವರು ಹಣ ವಸೂಲಿ ಮಾಡುತ್ತಿದ್ದಾರೆ. ಇವರಿಗೆ ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮನವಿಯಲ್ಲಿ ಸ್ಪಷ್ಟ ಪಡಿಸಲಾಗಿದೆ.
ಯೂಟ್ಯೂಬ್ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡುತ್ತಿರುವ ಪ್ರಕರಣ ಜಾಸ್ತಿಯಾಗುತ್ತಿರುವುದರಿಂದ ಪೊಲೀಸ್ ಇಲಾಖೆಯಿಂದ ನಕಲಿ ಯೂಟ್ಯೂಬರ್ಸ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಎಸ್ಪಿ ಕೋರಲಾಗಿದೆ.
ಇದರ ಜೊತೆಗೆ ಕೆಲವರು ತಮ್ಮ ವಾಹನದ ಮೇಲೆ ಪ್ರೆಸ್ ಎಂದು ಬೋರ್ಡ್ ಹಾಕಿಕೊಂಡು ತಿರುಗುತ್ತಿದ್ದಾರೆ. ಸಂಘದ ಅಧಿಕೃತ ಗುರುತಿನ ಚೀಟಿ ಹೊಂದಿಲ್ಲದೆ ಪ್ರೆಸ್ ಎಂದು ವಾಹನದ ಮೇಲೆ ಬೋರ್ಡ್ ಹಾಕಿಕೊಂಡು ತಿರುಗುವವರನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಶಾಖೆಯ ಅಧ್ಯಕ್ಷ ಜಿ.ನಾಗೇಶ್, ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶ ಕುಮಾರ್, ಖಜಾಂಚಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಪ್ರಮುಖರಾದ ಗಿರೀಶ್ ರಾಯ್ಕರ್, ಇಮ್ರಾನ್ ಸಾಗರ್, ಸತ್ಯನಾರಾಯಣ ಉಪಸ್ಥಿತರಿದ್ದರು.








