ಬೆಂಗಳೂರು: ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ನಾಳೆ (ಜೂನ್ 20) ಜಗನ್ನಾಥ ಭವನದಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ನಡೆಸಲಾಗುವುದು ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಬಿಜೆಪಿಯ 3 ಜಿಲ್ಲೆಗಳೂ ಸೇರಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ವಿವರಿಸಿದರು. ಜಾಥಾದ ಬಳಿಕ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ 9.00 ಗಂಟೆಗೆ ಜಗನ್ನಾಥ ಭವನದಿಂದ ಜಾಥಾ ಆರಂಭವಾಗಲಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ವಿಧಾನಪರಿಷತ್ ನೂತನ ಸದಸ್ಯ ಸಿ.ಟಿ.ರವಿ ಅವರು ನೇತೃತ್ವ ವಹಿಸಲಿದ್ದಾರೆ. ಸುಮಾರು 250-300 ಸೈಕಲ್‍ಗಳ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು ಎಂದು ವಿವರಿಸಿದರು.
ಸೈಕಲ್ ತುಳಿದುಕೊಂಡು ಹೋಗಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದೇವೆ ಎಂದ ಅವರು, ಕಾಂಗ್ರೆಸ್ಸಿನವರದು ಡಬಲ್ ಸ್ಟಾಂಡರ್ಡ್. ಅವರು ಡಿಜಿಪಿ ಕಚೇರಿ ಒಳಗೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಯಾರದೋ ಮನೆಯ ಬಳಿ ಹೋದರೆ ಟೆರರಿಸ್ಟ್ ಥರ ಹೊಡೆದು, ಬಡಿದು ಅರೆಸ್ಟ್ ಮಾಡಿ ಅವರ ಹಿನ್ನೆಲೆಯನ್ನು ಪಡೆಯುತ್ತಾರೆ. ಅವರ ಆಧಾರ್ ಕಾರ್ಡ್, ಫೋಟೊ, ಅಡ್ರೆಸ್ ಪಡೆದು ಕಾರ್ಯಕರ್ತರು ಭಯ ಪಡುವ ವಾತಾವರಣ ಸೃಷ್ಟಿಸುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ರೈತರಿಗೆ ‘ವಿದ್ಯುತ್ ಪರಿಹಾರ’ದ ಸುಳ್ಳು ಮಾಹಿತಿ ವೀಡಿಯೋ ಹರಿಬಿಟ್ಟವರ ವಿರುದ್ಧ ‘BESCOM’ ದೂರು
BIG NEWS: ‘ರಾಜ್ಯ ಸರ್ಕಾರಿ ನೌಕರ’ರು ತಪ್ಪದೇ ಈ ಕೆಲಸ ಮಾಡುವಂತೆ ಸರ್ಕಾರ ಸೂಚನೆ