ಬೆಂಗಳೂರು: ಶೋಷಿತ ಪೀಡಿತ ಸಮುದಾಯದ ದನಿಯಾಗಿರುವ ಹೋರಾಟಗಾರ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಸನ್ನಿವೇಶ ತುಂಬಾ ಸಂತೋಷ ಅನಿಸುತ್ತಿದೆ. ಹೋರಾಟದ ಕಿಚ್ಚು ನಶಿಸುತ್ತಿರುವ ಕಾಲಘಟ್ಟವಿದು. ವಿಧಾನ ಪರಿಷತ್ ವಿಪಕ್ಷ ನಾಯಕ ಯಾರಾಗಬೇಕೆಂಬ ಚರ್ಚೆ ನಾನಾ ರೀತಿ ನಡೆಯುತ್ತಿತ್ತು. ರಾಜ್ಯಾಧ್ಯಕ್ಷನಾಗಿ, ಬಿ.ಎಸ್. ಯಡಿಯೂರಪ್ಪ ಅವರ ಮಗನಾಗಿ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ಮಾತಾಡಿದೆ. ಛಲವಾದಿ ನಾರಾಯಣ ಸ್ವಾಮಿ ಅವರು ಬುಡಕಟ್ಟು ನಾಯಕರಾಗಿ ಹೋರಾಟಗಾರರಾಗಿ ಮೇಲೆ ಬಂದವರು. ಅವರನ್ನು ಗುರುತಿಸಬೇಕಾದ ಅಗತ್ಯವಿದೆ ಎಂದು ಹೇಳಿದಾಗ ಹೆಮ್ಮೆಯಿಂದ ಒಪ್ಪಿಗೆ ಸೂಚಿಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ರೈತಾಪಿ ವರ್ಗದ ಪರವಾಗಿ ಹೋರಾಟ ಮಾಡಿದ ರಾಜ್ಯದ ಏಕೈಕ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು. ಅವರನ್ನು ಎಲ್ಲ ಕಡೆ ಹೋರಾಟಗಾರ ಎಂದು ಗುರುತಿಸುತ್ತಾರೆ. ಮಾಜಿ ಸಿಎಂ ಎಂದು ಅಲ್ಲ. ಧ್ವನಿ ಇಲ್ಲದವರ ಪರವಾಗಿ ಹೋರಾಟ ಮಾಡಿದರು. ಅವರು ರಾಜ್ಯದಲ್ಲಿ ಮಾಡಿದಷ್ಟು ಹೋರಾಟಗಳು ಬೇರೆ ಯಾರೂ ಮಾಡಿರಲು ಸಾಧ್ಯವಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದು ಬಂದವರು. ಶಿಕಾರಿಪುರ ಮನೆಯಲ್ಲಿ ತಂದೆ ತಾಯಿಯ ಆದರ್ಶ ನಮ್ಮ ಮನೆಯಲ್ಲಿ ಇಂದಿನ ವರೆಗೂ ನಡೆದು ಬಂದಿದೆ. ಮನೆಗೆ ಯಾರು ಬಂದರೂ ಯಾವ ಜಾತಿ ವರ್ಗ ಎಂದು ಕೇಳುವುದಿಲ್ಲ. ಊಟ ಆಗಿದೆಯಾ, ತಿಂಡಿ ಆಗಿದೆಯಾ ಎಂದಷ್ಟೇ ಕೇಳುತ್ತಿದ್ದರು. ಅತಿಥಿ ಸತ್ಕಾರ ಮಾಡುತ್ತಿದ್ದರು.
ನಾವು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತೇವೆ. ಯಡಿಯೂರಪ್ಪರ ಮಗನಾಗಿ ರಾಜಕಾರಣ ಮಾಡುವುದಿಲ್ಲ, ಅದರ ಬದಲು ತಂದೆಯವರ ಮಾರ್ಗದರ್ಶನ ನೆನಪು ಮಾಡಿಕೊಳ್ಳುವೆ ಎಂದು ವಿಜಯೇಂದ್ರ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳಿಕೊಂಡು 50-60 ವರ್ಷ ಆಡಳಿತ ಮಾಡಿದ ಪಕ್ಷ ಅಂಬೇಡ್ಕರರ ಅಂತ್ಯ ಸಂಸ್ಕಾರವನ್ನು ಕೂಡ ಗೌರವಯುತವಾಗಿ ಮಾಡಲಿಲ್ಲ. ಅಂಬೇಡ್ಕರ್ ಹುಟ್ಟೂರು ಮೌ ಪಟ್ಟಣಕ್ಕೆ ದೇಶದ ಪ್ರಧಾನಿಯಾಗಿ ಮೊದಲ ಬಾರಿ ಭೇಟಿ ಕೊಟ್ಟವರು ನರೇಂದ್ರ ಮೋದಿಯವರು. ಮೋದೀಜಿ ಪ್ರಧಾನ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೊಳ್ಳೇಗಾಲದ ಮಹೇಶ್ ಅವರನ್ನು ನಾನು ಮರೆಯಬಾರದು. ಅವತ್ತು ಶಾಸಕರಾಗಿ ಮಂತ್ರಿಯಾಗಿದ್ದರೂ ಏನೂ ಅಪೇಕ್ಷೆ ಪಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಮುಂದೆ ಬಂದವರು ಕೊಳ್ಳೇಗಾಲದ ಮಹೇಶಣ್ಣ ಎಂದು ವಿಜಯೇಂದ್ರ ಸ್ಮರಿಸಿಕೊಂಡರು.
ನಗರಕ್ಕೆ ಸೀಮಿತವಾಗಿದ್ದ ಪಕ್ಷ ಎಂಬ ಹೆಸರಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋದವರು ಯಡಿಯೂರಪ್ಪ, ಅನಂತಕುಮಾರ್ ಅವರಂತಹ ಹಿರಿಯ ಮುಖಂಡರು,. ಬ್ರಾಹ್ಮಣರ ಪಕ್ಷ, ನಗರಕ್ಕೆ ಸೀಮಿತವಾಗಿದ್ದ ಪಕ್ಷ ಎಂಬ ಹೆಸರಿನಿಂದ ಎಲ್ಲರ ಪಕ್ಷ ಎಂಬ ಹೆಸರಿಗೆ ಬದಲಾವಣೆಗೆ ಕಾರಣರಾದವರು ಈ ಮುಖಂಡರು. ಶೋಷಿತ ಸಮುದಾಯದ ಧ್ವನಿಯಾಗಿದ್ದ ಎಲ್‌ಜಿ ಹಾವನೂರು ಅವರನ್ನು ಬಿಜೆಪಿಗೆ ಕರೆತಂದವರು ಬಿಎಸ್‌ವೈ. ಕೇಂದ್ರ ಸಚಿವ ಸಂಪುಟದಲ್ಲಿ 12ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಪಂಗಡದವರಿದ್ದಾರೆ. ಅವರಿಗೆಲ್ಲ ಬಿಜೆಪಿ ಸ್ಥಾನಮಾನ, ಗೌರವ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸರಿಯಾದ ದಿಕ್ಕಿನಲ್ಲಿ ನಡೆಯೋಣ ಎಂದು ವಿಜಯೇಂದ್ರ ಹೇಳಿದರು.
‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ
BIG NEWS: ಸರ್ಕಾರದ ಎಲ್ಲಾ ಇಲಾಖೆ ‘ನಾಮಫಲಕ’ಗಳನ್ನು ‘ಕನ್ನಡ’ದಲ್ಲೇ ಪ್ರದರ್ಶಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ