ಶಿವಮೊಗ್ಗ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದೆ ಎಂದು ಆರೋಪಿಸಿ, ಸಾಗರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ಬಿಜೆಪಿ ಕಾರ್ಯಕರ್ತರೊಂದಿಗೆ ಜಮಾಯಿಸಿದ ಹರತಾಳು ಹಾಲಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನ ಇಬ್ಬಂದಿ ನೀತಿ
ಈ ಪ್ರತಿಭಟನೆಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ ಅವರು, “ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದನ್ನು ಬೆಂಬಲಿಸುವ ಬದಲು ಕಾಂಗ್ರೆಸ್ ಈ ಕಾಯ್ದೆಯನ್ನು ಜಾರಿಗೆ ತರಲು ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್ಸಿಗರಿಗೆ ಮಹಿಳೆಯರ ಸಬಲೀಕರಣ ಬೇಕಿಲ್ಲ, ಅವರಿಗೆ ಕೇವಲ ರಾಜಕೀಯ ಅಧಿಕಾರ ಮುಖ್ಯ,” ಎಂದು ಕಿಡಿಕಾರಿದರು.
ಮಹಿಳೆಯರ ಆಕ್ರೋಶಕ್ಕೆ ಬೆಲೆ ತೆರಬೇಕಾದೀತು
ಮಹಿಳೆಯರ ಶಕ್ತಿಯನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ನಾರಿಯರ ಆಕ್ರೋಶದ ಮುಂದೆ ಯಾವ ಸರ್ಕಾರವೂ ಉಳಿಯುವುದಿಲ್ಲ. ಕೂಡಲೇ ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿಕೊಂಡು ಮಹಿಳಾ ಮೀಸಲಾತಿ ಜಾರಿಗೆ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು.
ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಮಾಹಿತಿ
ಡಿ-ಲಿಮಿಟೇಷನ್ (ಕ್ಷೇತ್ರಗಳ ಪುನರ್ ವಿಂಗಡಣೆ) ಕುರಿತು ಕಾಂಗ್ರೆಸ್ ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿದೆ. ಇದರಿಂದ ಕರ್ನಾಟಕಕ್ಕೆ ಯಾವುದೇ ನಷ್ಟವಾಗುವುದಿಲ್ಲ, ಬದಲಾಗಿ ಎಂ.ಎಲ್.ಎ ಮತ್ತು ಎಂ.ಪಿ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಬೃಹತ್ ಪ್ರತಿಭಟನೆ
ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ‘ನಾರಿ ಶಕ್ತಿಯಿಂದ ನವ ಭಾರತದ ಉದಯ’, ‘ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಮೇಘರಾಜ್, ಪ್ರಸನ್ನ ಕೆರೆಕೈ, ಸಾಗರ ನಗರ ಮಂಡಲ ಅಧ್ಯಕ್ಷ ಗಣೇಶ್ ಪ್ರಸಾದ್ ಕೆ.ಆರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ರಾಜನಂದಿನಿ ಕಾಗೋಡು, ಮಧುರ ಶಿವಾನಂದ್, ಸವಿತಾ ವಾಸು, ಶ್ರೀನಿವಾಸ್ ಮೇಸ್ತ್ರಿ, ಪ್ರೇಮಾ ಕಿರಣ್ ಸಿಂಗ್, ಪರಶುರಾಮ್, ರವಿ ಬಸ್ರಾಣಿ, ಶ್ವೇತಾ ಸಂತೋಷ್ ಶೇಟ್, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಇರತರರು ಭಾಗಿಯಾಗಿದ್ದರು.








