ಬೆಂಗಳೂರು: ಧರ್ಮದ ವಿಷಯದಲ್ಲಿ ರಾಜಕೀಯ ಮಾಡಬಾರದು. ಆದರೆ ಬಿ.ಜೆ.ಪಿ ಅವರು ಧರ್ಮದ ಹೆಸರಿನಲ್ಲಿಯೇ ರಾಜಕೀಯ ಮಾಡುತ್ತಾ ಬಂದಿದ್ದರೂ ಸಹ, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಹಾಗೂ ಅರ್ಚಕರ ಕಲ್ಯಾಣ ಅಭಿವೃದ್ಧಿ ಮಾಡದೇ, ಕಾಂಗ್ರೆಸ್ ಸರ್ಕಾರ ಮಾಡಲು ಯೋಜಿಸಿರುವ ಕಾಯಿದೆಯನ್ನು ಸಹಿಸದೆ ರಾಜ್ಯಪಾಲರಿಗೆ ಒತ್ತಡ ಹೇರಿ ಸಹಿ ಹಾಕಿಸದೇ ಬಿಜೆಪಿಯು ಅರ್ಚಕ ಸಮೂಹಕ್ಕೆ ದ್ರೋಹ ಬಗೆಯುತ್ತಿದೆ ಎಂಬುದಾಗಿ ಅರ್ಚಕರ ಸಮೂಹ ಆಕ್ರೋಶ ವ್ಯಕ್ತ ಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಕಾಂಗ್ರೆಸ್ ಸರ್ಕಾರವು ಅರ್ಚಕರ ಕಲ್ಯಾಣಕ್ಕೆ ಯೋಜನೆ ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ವರ್ಷವಾದರೂ ಮಾನ್ಯ ರಾಜ್ಯಪಾಲರು ಸಹಿ ಹಾಕಿಲ್ಲ. ಅರ್ಚಕರ ಕಲ್ಯಾಣ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ ಎಂದಿದೆ.
ಅರ್ಚಕರಿಗೆ ಮನೆ ನಿರ್ಮಾಣ, ರೂ. 10 ಲಕ್ಷ ಜೀವ ವಿಮೆ, ಅರ್ಚಕರ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ, ಪ್ರತಿ ವರ್ಷ ‘ಸಿ’ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ಇತ್ಯಾದಿ ಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ರೂಪಿಸಿರುವ ಕಾನೂನು ಇದಾಗಿದೆ ಎಂದು ತಿಳಿಸಿದೆ.
ಸರ್ಕಾರದ ಬಜೆಟ್ ನಲ್ಲಿ ತಸ್ತೀಕ್ ಮೊತ್ತವನ್ನು ರೂ.60,000 ದಿಂದ ರೂ.72,000 ಹೆಚ್ಚಳವಾಗಿದೆ. ಈ ಮೊದಲು ಕೂಡ ಅಂದರೆ 2013, 2015 ಮತ್ತು 2017 ಹಾಗೂ ಪ್ರಸ್ತುತ 2025 ರಲ್ಲಿ ಒಟ್ಟು 4 ಬಾರಿ ರೂ.48,000 ತಸ್ತೀಕ್ ಮೊತ್ತವನ್ನು ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರ ಎಂದಿದೆ.
ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮುಜರಾಯಿ ಇಲಾಖೆಯಲ್ಲಿ ಅಭಿವೃದ್ಧಿಯ ಪ್ರವಾಹವೇ ಜರುಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
ಅರ್ಚಕರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿ ಮಾಡಿರುವ ಕಡತ ಸಂಬಂಧ ಅರ್ಚಕರ ನಿಯೋಗದೊಂದಿಗೆ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಯಾವ ಉದ್ದೇಶದಿಂದ ಕಡತಕ್ಕೆ ಸಹಿಹಾಕದೆ ವಿಳಂಬ ಮಾಡುತ್ತಿದ್ದೀರಿ. ಮತ್ತೊಮ್ಮೆ ಅನುಮೋದನೆಗೆ ಮನವಿ ಮಾಡಲಾಗುವುದು ಎಂದು ಪ್ರೊ।। ಡಾ॥ ರಾಧಾಕೃಷ್ಣ ಕೆ.ಇ., ಗೌರವ ಪ್ರಧಾನ ಸಲಹೆಗಾರರು, ಡಾ। ಎಸ್.ಆರ್. ಶೇಷಾದ್ರಿ, ಭಟ್ಟರ್, ಗೌರವ ಉಪಾಧ್ಯಕ್ಷರು, ಡಾ॥ ಕೆ.ಎಸ್.ಎನ್. ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.) ತಿಳಿಸಿದ್ದಾರೆ.
ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ