ಬೆಳಗಾವಿ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರು ಸ್ವಪಕ್ಷದ ವಿರುದ್ಧವೆ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 9 ಸ್ಥಾನ ಸೋಲಲು ಒಳ ಒಪ್ಪಂದವೇ ಕಾರಣ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಒಪ್ಪಂದದಿಂದಲೇ ಬಿಜೆಪಿಗೆ ಹಾನಿಯಾಗಿದೆ. 9 ಕಡೆ ಬಿಜೆಪಿ ಸೋಲಲು ಒಳ ಒಪ್ಪಂದವೇ ಕಾರಣ. ಸೋಮಣ್ಣ ಸೋಲಿಸಲು 6 ಕೋಟಿ ನಮ್ಮವರೇ ಕೊಟ್ಟಿದ್ದರು ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಸ್ಫೋಟಕ ಹೇಳಿಕೆ ನೀಡಿದರು.
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆ. ಚುನಾವಣೆಗೆ ಸಾರಾಯಿ ಕೊಡಿಸಲು 187 ಕೋಟಿ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಇಡೀ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.ವಾಲ್ಮೀಕಿ ನಿಗಮದ ಈ ಹಗರಣದ ಆದ ತಕ್ಷಣ ಅಮಿತ್ ಶಾ ಅವರಿಗೆ ಪತ್ರ ಬರೆದೆ. ಸಿಬಿಐಗೆ ಕೊಡಬೇಕೆಂದು ಹೇಳಿದೆ. ಅವರು ಅದಕ್ಕೆ ಉತ್ತರಿಸಿದರು. 3 ಕೋಟಿಗಿಂತ ಹೆಚ್ಚಿನ ಆದರೆ ಸಿಬಿಐ ಬರುತ್ತದೆ ಸಿಬಿಐ ಬಂದಿದೆ, ಎಲ್ಲಾ ಆಯಾಮದಲ್ಲೂ ತನಿಖೆ ಆಗುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ಅವಧಿಯ ಹಗರಣವನ್ನು ಬಯಲಿಗೆಳೆಯುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದು 15 ತಿಂಗಳಿನಿಂದ ಏನು ಕತ್ತೆ ಕಾಯಲು ಹೋಗಿದ್ರಾ? ಅಧಿಕಾರ ಸ್ವೀಕರಿಸಿದ ನಂತರವೇ ಪ್ರಾರಂಭಿಸಬೇಕಿತ್ತು. ತಾಕತ್ತಿದ್ದರೆ ಎಲ್ಲ ತನಿಖೆ ನಡೆಸಿ ಹಿಂದೆ ಸರಿಯಲ್ಲ. ಅದರಿಂದ ನಮ್ಮಲ್ಲಿಯೂ ಭ್ರಷ್ಟರು ಸಿಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಸದನದಲ್ಲಿ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೊಗಳುತ್ತಿರುತ್ತಾರೆ. ಈ ಒಂದು ವಿಚಾರವಾಗಿ ಮಾತನಾಡಿದ ಅವರು ನಾನು ಯಾವತ್ತೂ ಸಿದ್ದರಾಮಯ್ಯ ಅವರನ್ನು ಹೊಗಳಿಲ್ಲ. ನಾನು ಅವರ ಬಳಿ ಕೆಲಸಕ್ಕೂ ಹೋಗಿಲ್ಲ. ಅಲ್ಲದೆ ಬೇರೆಯವರ ರೀತಿ ರಾತ್ರಿ ಅವರಿಗೆ ಫೋನ್ ಸಹ ಮಾಡುವುದಿಲ್ಲ ಎಂದು ತಿಳಿಸಿದರು.
ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಸುಳಿವಿಲ್ಲ, ಯಾವುದೇ ಚುನಾವಣೆಯು ಇಲ್ಲ. ಸಿಎಂ ಕುರ್ಚಿಗಾಗಿ ಕಿತ್ತಾಟ ಇದೆ ನೋಡಬೇಕು ಏನಾಗುತ್ತದೆ. ಶಾಸಕರು ಮಂತ್ರಿಗಳ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಶಾಸಕರನ್ನು ಸಚಿವರು ಮಾತಾಡಿಸಿಲ್ಲ.ಕೇವಲ ಗ್ಯಾರಂಟಿ ಅಂತ ಹೋಗುತ್ತಿದ್ದಾರೆ ಗ್ಯಾರಂಟಿ ಮೇಲೆ ನಿರೀಕ್ಷಿಸಬೇಡಿ ಅಂತ ಶಾಸಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.