ಚೆನ್ನೈ: ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ತೀವ್ರವಾಗಿ ಟೀಕಿಸುತ್ತಲೇ ಬಂದಿದ್ದ ಬಿಜೆಪಿ, ಇದೀಗ ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿ ತಾನೂ ಕೂಡ ‘ಗ್ಯಾರಂಟಿ’ಗಳ ಮೊರೆ ಹೋಗಿದೆ. ಏಪ್ರಿಲ್ 23ರಂದು ನಡೆಯಲಿರುವ ಚುನಾವಣೆಗಾಗಿ ಇಂದು ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮತದಾರರನ್ನು ಸೆಳೆಯಲು ಹತ್ತಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಪ್ರಣಾಳಿಕೆ ಬಿಡುಗಡೆ ಮಾಡಿ, ತಮಿಳುನಾಡಿನ ಸಮಗ್ರ ಅಭಿವೃದ್ಧಿಯ ಭರವಸೆ ನೀಡಿದರು.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಆಕರ್ಷಣೆಗಳು:
-
ಮಹಿಳೆಯರಿಗೆ ಮಾಸಿಕ ಭತ್ಯೆ: ಕುಟುಂಬದ ಪ್ರತಿ ಯಜಮಾನಿಗೆ ತಿಂಗಳಿಗೆ 2,000 ರೂ. ಆರ್ಥಿಕ ನೆರವು.
-
ಒಂದು ಬಾರಿಯ ವಿಶೇಷ ಧನಸಹಾಯ: ಪ್ರತಿ ಮನೆಗೆ ತಲಾ 10,000 ರೂ. ಗಳ ಒಂದು ಬಾರಿಯ ಆರ್ಥಿಕ ಸಹಾಯದ ಭರವಸೆ.
-
ಉಚಿತ ಸಿಲಿಂಡರ್: ಪೊಂಗಲ್, ದೀಪಾವಳಿ ಮತ್ತು ತಮಿಳು ಹೊಸ ವರ್ಷದ ಸಂದರ್ಭದಲ್ಲಿ ವರ್ಷಕ್ಕೆ ಒಟ್ಟು 3 ಉಚಿತ ಗ್ಯಾಸ್ ಸಿಲಿಂಡರ್.
-
ರೈತರಿಗೆ ‘ಉಜವೇ ಥಾಯ್’ ಯೋಜನೆ: ಕೇಂದ್ರದ ಪಿಎಂ-ಕಿಸಾನ್ ಯೋಜನೆಯ ಹಣಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 3,000 ರೂ. ಸೇರ್ಪಡೆ. ಇದರಿಂದ ರೈತರಿಗೆ ಸಿಗುವ ವಾರ್ಷಿಕ ನೆರವು 9,000 ರೂ. ಗಳಿಗೆ ಏರಿಕೆ.
ಸಂಸ್ಕೃತಿ ಮತ್ತು ಧಾರ್ಮಿಕ ಭರವಸೆಗಳು:
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜೆ.ಪಿ. ನಡ್ಡಾ, ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಬೆಳಗಿಸುವ ಸಂಪ್ರದಾಯವನ್ನು ಪುನರಾರಂಭಿಸುವುದಾಗಿ ಘೋಷಿಸಿದರು. ಅಲ್ಲದೆ, ರಾಜ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಡಿಎಂಕೆ ವಿರುದ್ಧ ವಾಗ್ದಾಳಿ:
ಇದೇ ವೇಳೆ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಡಿಎಂಕೆ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದೆ ಎಂದು ಟೀಕಿಸಿದರು. ಬಿಜೆಪಿಯ ಈ ಪ್ರಣಾಳಿಕೆಯು ರಾಜ್ಯದ ಜನರ ಬದುಕಿನಲ್ಲಿ ಹೊಸ ಬದಲಾವಣೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘LPG ಗ್ಯಾಸ್ ಸಿಲಿಂಡರ್’ ಅವಧಿ ಮುಗಿದಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯ | LPG Cylinder
BREAKING: ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಸಾವು








