ತುಮಕೂರು : ತುಮಕೂರಿನ ಕುಂಚಿಟಿಗರ ಭವನದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶ ನಡೆಯುತ್ತಿರುವಾಗ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ದೇವೇಗೌಡರ ವಿರುದ್ಧ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಇದೀಗ ದೇವೇಗೌಡರಿಗೆ ಭದ್ರತಾ ವೈಫಲ್ಯವಾಗಿದೆ ಎಂದು ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿವೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ಭದ್ರತಾ ವೈಫಲ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರಚೋದನೆಯಿಂದ ಗಲಾಟೆ ಮಾಡಲಾಗಿದೆ. ಪ್ರಚಾರ ಸಭೆಗೆ ನುಗ್ಗಿ ಗಲಾಟೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಲಾಗಿದೆ. ಜೆಡಿಎಸ್ ಪಕ್ಷದ ಕಾನೂನು ವಿಭಾಗದ ಅಧ್ಯಕ್ಷ ಎಪಿ ರಂಗನಾಥ್ ಉಭಯ ಪಕ್ಷಗಳ ಪರವಾಗಿ ದೂರು ನೀಡಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಪರ ಚುನಾವಣಾ ಪ್ರಚಾರಕ್ಕೆ ದೇವೇಗೌಡರು ತುಮಕೂರಿಗೆ ಆಗಮಿಸಿದ್ದರು. ತುಮಕೂರಿನ ಕುಂಚಿಟಿಗರ ಭವನದಲ್ಲಿ ಮೈತ್ರಿ ಪಕ್ಷದ ಸಮಾವೇಶ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರ ಸೋಗಿನಲ್ಲಿ ಬಂದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ದೇವೇಗೌಡರ ಜೊತೆ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಮಹಿಳೆಯರ ಕುರಿತು ಅವಹೇಳನ ಹೇಳಿಕೆ ನೀಡಿದ ಕುಮಾರಸ್ವಾಮಿ ವಿರುದ್ಧ ಹಾಗೂ ದೇವೇಗೌಡರ ವಿರುದ್ಧ ಘೋಷಣೆ ಪ್ರಾರಂಭಿಸಿದರು.
ಇದರಿಂದ ಕೆಲಕಾಲ ಹೈಡ್ರಾಮಾ ನಡೆಯಿತು. ತಕ್ಷಣವೇ ಸ್ಥಳಕ್ಕಾಗಮಿಸಿದ ಮಹಿಳಾ ಪೊಲೀಸರು ಕೈ ಕಾರ್ಯಕರ್ತೆಯರನ್ನು ಹೊರದೂಡಲು ಯತ್ನಿಸಿದರು. ಘಟನೆ ಕುರಿತು ನಂತರ ಪ್ರತಿಕ್ರಿಯಿಸಿದ್ದ ಸೋಮಣ್ಣ, ಕಾಂಗ್ರೆಸ್‌ನವರು ಸೋಲಿನ ಹತಾಶೆ ಮನೋಭಾವನೆಯಿಂದ ಹೀಗೆ ಮಾಡಿದ್ದಾರೆ. ಯಾರೋ ಹೆಣ್ಣು ಮಕ್ಕಳನ್ನು ಕಳುಹಿಸಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.