ಬೆಂಗಳೂರು : ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಬಂಧಿಸದಂತೆ ಹೊರಡಿಸಿರುವ ಮಧ್ಯಂತರ ರಕ್ಷಣಾ ಆದೇಶವನ್ನು ತೆರವುಗೊಳಿಸುವಂತೆ ಸಿಐಡಿ ಪೊಲೀಸರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಈ ವೇಳೆ ಶಾಸಕ ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಜರಾಗಿ, ಪ್ರಕರಣದಲ್ಲಿ ಈಗಾಗಲೇ ಅರ್ಜಿದಾರರ ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೈಕೋರ್ಟ್ ಮಧ್ಯಂತರ ರಕ್ಷಣೆ ಮಾಡಿದೆ. ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗಲು ಸೂಚಿಸಿ ಅರ್ಜಿದಾರರಿಗೆ ಎರಡು ಬಾರಿ ಸಮನ್ಸ್ ನೀಡಿದ್ದರು. ಅದರಂತೆ ಅರ್ಜಿದಾರರ ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ. ಹೀಗಿದ್ದರೂ ತನಿಖೆ/ವಿಚಾರಣೆಗೆ ಸಹರಿಸುತ್ತಿಲ್ಲ. ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಸಿಐಡಿ ಪೊಲೀಸರು ಮಂಡಿಸುತ್ತಿರುವ ವಾದ ಸರಿಯಲ್ಲ ಎಂದು ಪ್ರತಿ ಆಕ್ಷೇಪಣೆ ವ್ಯಕ್ತಪಡಿಸಿದರು.
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೋಕಾ ಕಾಯ್ದೆಯ ಸೆಕ್ಷನ್ 3 ಮತ್ತು ಸೆಕ್ಷನ್ 4 ಹೇರಲು ಸಿಐಡಿ ಉಪ ಅಧೀಕ್ಷಕರಿಗೆ ಅನುಮತಿ ನೀಡಿ ಸಿಐಡಿ ಪೊಲೀಸ್ ಮಹಾ ನಿರ್ದೇಶಕರು ಆ.12ರಂದು ಆದೇಶ ಹೊರಡಿಸಿದ್ದರು.ಈ ಆದೇಶ ರದ್ದು ಕೋರಿ ಪ್ರಕರಣದ ಐದನೇ ಆರೋಪಿಯಾದ ಶಾಸಕ ಬಿ.ಎ. ಬಸವರಾಜ್ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿಗೆ ಸಿಐಡಿ ಪೊಲೀಸರ ಪರ ಆಕ್ಷೇಪಣೆ ಸಲ್ಲಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರ ಪರವಾಗಿ ನೀಡಲಾಗಿರುವ ಮಧ್ಯಂತರ ರಕ್ಷಣಾ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು.ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.








