ಮಡಿಕೇರಿ : ಸಹಕಾರ ಇಲಾಖೆಯಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2022-23 ನೇ ಸಾಲಿಗೆ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಅವಲಂಭಿತ ಕುಟುಂಬ ವರ್ಗದವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು 2022-23 ನೇ ಸಾಲಿಗೆ 2022ರ ನವೆಂಬರ್, 01 ರಿಂದ ಮರು ಜಾರಿಗೊಳಿಸಿದೆ.
ಗ್ರಾಮೀಣ ಸಹಕಾರ ಸಂಘಗಳ/ ಸ್ವ-ಸಹಾಯ ಗುಂಪುಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ. 500 ಗಳ ವಂತಿಕೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.100 ಗಳನ್ನು ಪಾವತಿಸುವುದು. ಹಾಗೆಯೇ ನಗರ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000 ಗಳ ವಂತಿಕೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.200 ಗಳನ್ನು ಪಾವತಿಸಿ, ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ಹತ್ತಿರದ ಸಹಕಾರ ಸಂಘಗಳಿಗೆ ನೀಡಿ ಈ ಯೋಜನೆ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಸದಸ್ಯರಿಗೆ ನೋಂದಣಿ ಶುಲ್ಕ ಉಚಿತವಾಗಿದ್ದು, ಅಂತಹ ಸದಸ್ಯರು ಭಾವಚಿತ್ರ, ಜಾತಿ ದೃಢೀಕರಣ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಬೇಕು. ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರು ಯಶಸ್ವಿನಿ ಕಾರ್ಡ್ ಪಡೆಯಲು ಯಾವುದೇ ನಿರ್ಬಂದ ಇರುವುದಿಲ್ಲ. ಆದರೆ ಫಲಾನುಭವಿಗಳು ಯಾವುದಾದರು ಒಂದು ಯೋಜನೆಯಲ್ಲಿ ಮಾತ್ರ ವ್ಯೆದ್ಯಕೀಯ ಚಿಕಿತ್ಸೆ/ ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಪಡೆಯಲು ಅವಕಾಶವಿದೆ.
ಈ ಯೋಜನೆಯಡಿಯಲ್ಲಿ ನೋಂದಾಯಿತ ಸದಸ್ಯರುಗಳಿಗೆ ಯೂನಿಕ್ ಐ.ಡಿ ಸಂಖ್ಯೆಯುಳ್ಳ ಕಾರ್ಡ್ನ್ನು ಒದಗಿಸಲಾಗುವುದು. ಈ ಕಾರ್ಡ್ನ್ನು ಬಳಸಿ ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸುಮಾರು 1650 ಕಾಯಿಲೆಗಳಿಗೆ ಗರಿಷ್ಟ ಮಿತಿ ರೂ. 5 ಲಕ್ಷಗಳವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕ್ಗಳು, ಪಟ್ಟಣ ಸಹಕಾರ ಬ್ಯಾಂಕ್ಗಳು, ಎಪಿಸಿಎಂಎಸ್ ಇವುಗಳನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಕೂಡಲೇ ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.