ಕೊಪ್ಪಳ: ಜಾನುವಾರುಗಳ ಚರ್ಮಗಂಟು ರೋಗದ ಬಗ್ಗೆ ಕೊಪ್ಪಳ ಜಿಲ್ಲೆಯ ರೈತರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಕೊಪ್ಪಳ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಹೆಚ್. ನಾಗರಾಜ ಅವರು ತಿಳಿಸಿದ್ದಾರೆ.
BIGG NEWS : ಹೈದರಾಬಾದ್ ನಲ್ಲಿ `ಕನ್ನಡ ಭವನ’ ನಿರ್ಮಿಸಲು ಕನ್ನಡಿಗರ ಕಲ್ಯಾಣ ಸಂಗಮ ಮನವಿ
ಚರ್ಮಗಂಟು ರೋಗ(Lumpy Skin Disease)ವು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, “ಕ್ಯಾಪ್ರಿ ಫಾಕ್ಸ್” ಎಂಬ ವೈರಾಣುವಿನಿಂದ ದನ, ಎಮ್ಮೆಗಳಲ್ಲಿ ಕಂಡುಬರುತ್ತದೆ. ಅದರಲ್ಲೂ ಮಿಶ್ರತಳಿ ರಾಸುಗಳ ಕರುಗಳಲ್ಲಿ ಈ ಬಾದೆ ಹೆಚ್ಚಾಗಿ ಕಂಡುಬರುತ್ತದೆ. ಈ ರೋಗವು ಕಚ್ಚುವ ಕೀಟಗಳಾದ ಸೊಳ್ಳೆ, ನೊಣ ಇತ್ಯಾದಿಗಳಿಂದ ತೀವೃತರವಾಗಿ ಹರಡುತ್ತದೆ.
ಕೊಪ್ಪಳ ಜಿಲ್ಲೆಯ ಅಳವಂಡಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಹಾಗೂ ಕುಕನೂರು ಹೋಬಳಿಯ ಒಂದು ಗ್ರಾಮದಲ್ಲಿ ದನ/ಎಮ್ಮೆಗಳಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿದ್ದು, ಇಲಾಖೆಯಿಂದ ರೋಗ ನಿಯಂತ್ರಣಕ್ಕಾಗಿ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಾನುವಾರುಗಳಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಸಂಪರ್ಕಿಸಲು ಜಿಲ್ಲೆಯ ರೈತಬಾಂದವರಲ್ಲಿ ವಿನಂತಿಸಲಾಗಿದೆ.
ರೋಗ ಲಕ್ಷಣಗಳು :
ಚರ್ಮಗಂಟು ರೋಗದ ಲಕ್ಷಣಗಳು ಇಂತಿವೆ. ಜಾನುವಾರುಗಳಲ್ಲಿ ಅತೀಯಾದ ಜ್ಷರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವಿಕೆ, ಜಾನುವಾರುಗಳ ಚರ್ಮದ ಮೇಲೆ 2 ರಿಂದ 5 ಸೆ,ಮಿ ನಷ್ಟು ಅಗಲವಿರುವ ಗಂಟುಗಳು ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಚರ್ಮದ ಮೇಲಿನ ಗಂಟುಗಳಿಗೆ ನೋಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ. ಇದಲ್ಲದೇ ಜಾನುವಾರುಗಳ ಹಾಲಿನ ಇಳುವರಿ ಕೂಡ ಕಡಿಯಾಗುವುದು ಹಾಗೂ ಗರ್ಭಪಾತವಾಗುವ ಸಾದ್ಯತೆಗಳಿರುತ್ತವೆ. ಎತ್ತುಗಳು ಹೆಚ್ಚು ಬಳಲುವುದರಿಂದ ಕೆಲಸದ ಸಾಮರ್ಥ್ಯ ಕುಂಟಿತವಾಗುತ್ತದೆ. ಕರುಗಳು ತೀರ್ವವಾಗಿ ಬಳಲಿ ಸಾವಿಗಿಡಾಗಬಹುದು.
ಈ ಚರ್ಮಗಂಟು ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೇ ಕಚ್ಚುವ ಕೀಟಗಳಿಂದ ಕಲುಷಿತಗೊಂಡ ನೀರು ಮತ್ತು ಆಹಾರದ ಸೇವೆನೆ ಹಾಗೂ ಜಾನುವಾರುಗಳ ನೇರ ಸಂಪರ್ಕದಿಂದ ಹರಡುತ್ತದೆ.
ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ :
ಚರ್ಮಗಂಟು ರೋಗವು ವೈರಾಣುವಿನಿಂದ ಬರುವುದರಿಂದ ನಿರ್ದೀಷ್ಟವಾದ ಚಿಕಿತ್ಸೆ ಇರುವುದಿಲ್ಲ ಹಾಗೂ ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಲಸಿಕೆ ಲಭ್ಯವಿರುವುದಿಲ್ಲ. ಆದರೆ ಈ ರೋಗದ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ರೋಗ ಲಕ್ಷಣದ ಆದಾರದ ಮೇಲೆ ಚಿಕಿತ್ಸೆ ನೀಡಬೇಕಾಗಿರುತ್ತದೆ. ಜಾನುವಾರುಗಳ ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ಅವುಗಳನ್ನು ತಂಪಾದ ಜಾಗದಲ್ಲಿ ಕಟ್ಟುವುದು. ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು ಆಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು.
ರೋಗ ಹರಡುವುದನ್ನು ತಡೆಯಲು ರೋಗಗೃಸ್ಥ ಜಾನುವಾರುಗಳನ್ನು ಬೇರ್ಪಡಿಸಬೇಕು. ರೋಗಗೃಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಹಸಿರು ಮೇವು ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5 ರಿಂದ 6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಸಲು ಹಸಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೇ ಕಚ್ಚುವ ಕೀಟಗಳಿಂದ ಹರಡುವುದರಿಂದ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಬೇಕು ಹಾಗೂ ಫಾರ್ಮಾಲಿನ್(1%), ಫಿನೈಲ್(2%) ಅಥವಾ ಸೋಡಿಯಂ ಹೈಪೋಕ್ಲೋರೈಟ್(2%) ದ್ರಾವಣವನ್ನು ದಿನಕ್ಕೆ 2 ಬಾರಿ ಮೈಮೇಲೆ ಸಿಂಪಡಿಸಬೇಕು.
ಜಿಲ್ಲೆಯ 29 ಗ್ರಾಮಗಳಲ್ಲಿ ದನ/ ಎಮ್ಮೆಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಈ ವರೆಗೆ ಒಟ್ಟು 333 ದನ/ ಎಮ್ಮೆಗಳಲ್ಲಿ ಚರ್ಮಗಂಟು ರೋಗವು ಕಂಡುಬಂದಿರುತ್ತದೆ. ಈ ರೋಗಕ್ಕೆ ಕೊಪ್ಪಳ ಜಿಲ್ಲೆಯ ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೋಗ ಪೀಡಿತ ದನ ಮತ್ತು ಎಮ್ಮೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈ ರೋಗದಿಂದ ಯಾವುದೇ ಜಾನುವಾರುಗಳು ಮೃತಪಟ್ಟಿರುವುದು ಕಂಡುಬಂದಿರುವುದಿಲ್ಲ. ಈ ರೋಗದ ತೀವೃತೆಯು ಅಷ್ಟಾಗಿ ಇರುವುದಿಲ್ಲ ಹಾಗೂ ಈ ರೋಗಕ್ಕೆ ನೀಡಲಾಗುವ ಚಿಕಿತ್ಸೆಗಳಿಗೆ ಜಾನುವಾರುಗಳು ಸ್ಪಂದಿಸುತ್ತಿದ್ದು, ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕಂಡುಬಂದಿರುವುದಿಲ್ಲ.
ರೈತಬಾಂಧವರು ಯಾವುದೇ ಕಾರಣಕ್ಕೂ ದೃತಿಗೆಡುವ ಅಥವಾ ಹೆದರುವ ಅವಶ್ಯಕತೆಯಿರುವುದಿಲ್ಲ. ಆದರೂ ಸಹ ಸದರಿ ರೋಗವು ವ್ಯಾಪಕವಾಗಿ ಹರಡುವ ಗುಣ ಹೊಂದಿದ್ದು, ರೋಗದ ನಿಯಂತ್ರಣಕ್ಕಾಗಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿರುತ್ತದೆ. ಈ ರೋಗವು ರೋಗಗೃಸ್ಥ ಜಾನುವಾರುವಿನಿಂದ ಇನ್ನೊಂದು ಜಾನುವಾರುವಿಗೆ ತೀವ್ರತರವಾಗಿ ಹರಡುವುದರಿಂದ ರೈತಬಾಂದವರು ಚರ್ಮಗಂಟು ರೋಗದ ನಿಯಂತ್ರಣಕ್ಕೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಈ ರೋಗದ ಮೇಲೆ ನಿಗಾವಹಿಸಿ, ಈ ರೋಗವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಲಕ್ಷಣಗಳು ಕಂಡುಬಂದಲ್ಲಿ ಮತ್ತು ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲೆಯಲ್ಲಿ ಜರುಗುವ ಜಾನುವಾರುಗಳ ಸಂತೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.