ಹಾವೇರಿ : ರಾಜ್ಯದಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಹಿಳೆಯರಿಗೆ, ಮಕ್ಕಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶಿಗ್ಗಾಂವ ತಾಲೂಕು ಖುರ್ಸಾಪುರ ಗ್ರಾಮದಲ್ಲಿ ಶನಿವಾರ ನೂತನ ಜವಳಿ ಪಾರ್ಕ್ ಹಾಗೂ ಮೆ.ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಕಂಪನಿಯ ಆಂಕರ್ ಸಿದ್ಧ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಾಲ ಬದಲಾಗುತ್ತಿದ್ದು, ಕೃಷಿ ಭೂಮಿ ಸಂಕುಚಿತಗೊಳ್ಳುತ್ತಿದೆ. ರೈತ ಕುಟುಂಬಗಳು ಬೆಳೆಯುತ್ತಿದ್ದು, ಭೂಮಿ ಮೇಲೆ ಅವಲಂಬನೆ ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿಯನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ಅವಲಂಬನೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲಾಗುದು.ಕೃಷಿಯನ್ನು ಒಂದು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಕ್ಕಳಿಗೆ ಶಿಕ್ಷಣ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ರೈತ ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗ ಭವಿಷ್ಯದ ಎರಡು ಅಸ್ತ್ರಗಳು. ಕೃಷಿಯ ಜೊತೆಗೆ ಇತರ ಉದ್ಯೋಗಾವಕಾಶಗಳನ್ನು ಕಲ್ಪಿಸಿ ರೈತರ ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ತರುವ ನಿಟ್ಟಿನಲ್ಲಿ ಸರ್ಕಾರ ಹೊಸ ನೀತಿಯನ್ನು ತರಲಿದೆ ಎಂದರು.
ಜಗತ್ತಿನಲ್ಲಿ ಜವಳಿ ಉದ್ಯಮದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದ ಚೀನಾ ದೇಶದಲ್ಲಿ ಜವಳಿ ಉದ್ಯಮ ಸ್ಥಗಿತಗೊಂಡಿರುವುದರಿಂದ ಇಡಿ ಜಗತ್ತು ಭಾರತದ ಜವಳಿ ಕ್ಷೇತ್ರದತ್ತ ನೋಡುತ್ತಿದೆ. ಭಾರತದಲ್ಲಿ ಜವಳಿ ಉದ್ಯಮ ಬೆಳವಣಿಗೆಗೆ ವಿಫುಲವಾದ ಅವಕಾಶಗಳಿವೆ. ಮುಂಬೈ-ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದ ಉದ್ಯಮವನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಿ ಹೆಚ್ಚಿನ ಉದ್ಯೋಗ ಸೃಜಿಸುವ ಕಂಪನಿಗಳಿಗೆ ಉತ್ತೇಜಿಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಆರಂಭಿಸಿ ರೈತರ ಮಕ್ಕಳಿಗೆ, ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತರಲಾಗುವುದು ಎಂದರು.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾದರೆ ರೈತರು ಹಾಗೂ ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢರಾಗುತ್ತಾರೆ. ಗಾರ್ಮೆಂಟ್ಸ್ ಇಂಡಸ್ಟ್ರೀ ಹೆಚ್ಚು ಉದ್ಯೋಗ ನೀಡುವ ಉದ್ಯಮವಾಗಿದೆ. ಬೆಂಗಳೂರ ಒಂದರಲ್ಲೇ 10 ಲಕ್ಷ ಗಾರ್ಮೆಂಟ್ಸ್ ಉದ್ಯೋಗಿಗಳಿದ್ದಾರೆ. ಈ ಪೈಕಿ ಶೇ.90ರಷ್ಟು ಮಹಿಳೆಯರಿದ್ದಾರೆ. ಖುರ್ಸಾಪುರದಲ್ಲಿ ಶಂಕುಸ್ಥಾಪನೆ ಮಾಡಿರುವ ಈ ಗಾರ್ಮೆಂಟ್ನಲ್ಲಿ ಮೊದಲ ಹಂತದಲ್ಲಿ ಮೂರು ಸಾವಿರ ಜನರಿಗೆ ಉದ್ಯೋಗ ದೊರೆಯಲಿದ್ದು, ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಸೆಪ್ಟೆಂಬರ್ 10 ರಿಂದ ತರಬೇತಿ ಆರಂಭಿಸಲಾಗುವುದು. ಜನವರಿ ಮಾಹೆಯಲ್ಲಿ ಕಾರ್ಖಾನೆ ಆರಂಭಿಸಲಾಗುವುದು. ಇದಲ್ಲದೇ ತಾಲೂಕಿನಲ್ಲಿ ಶಾಹಿ ಗಾರ್ಮೆಂಟ್ಸ್, ಗುಜರಾತ ಅಂಬುಜಾ ಫ್ಯಾಕ್ಟರಿ, ಎಥಲಾನ್ ಫ್ಯಾಕ್ಟ್ರಿ ಕಾರ್ಯಾರಂಭ ಮಾಡಿವೆ. ಬರುವ ಎರಡ್ಮೂರು ವರ್ಷಗಳಲ್ಲಿ ಶಿಗ್ಗಾಂವ ತಾಲೂಕಿನ 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ದೊರೆಯಲಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಐದು ಲಕ್ಷ ಮಹಿಳೆಯರಿಗೆ ಜವಳಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ದೊರೆಯಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಹೊಣೆ ನನ್ನಮೇಲಿದೆ. ಹಾಗಾಗಿ ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಮಾಡಲಾಗುತ್ತಿದೆ. ಜಾತಿ, ಮತ, ಪಂಥ ಬೇಧವಿಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ನಿಮ್ಮ ಆಶೀರ್ವಾದ: ಜನರ ಸಹಕಾರವಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಮಸ್ಥರಿಗೆ ನನ್ನ ಕೋಟಿ ಕೋಟಿ ನಮಸ್ಕಾರ. ಅವರ ಹಲವಾರು ಬೇಡಿಕಗಳಿದ್ದು, ಅವುಗಳನ್ನು ಈಡೇರಿಸಲಾಗುವುದು. ಶಿಗ್ಗಾಂವ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರೂ.28 ರಿಂದ 29 ಕೋಟಿ ಮೊತ್ತದ ಡಿಪೋ, ರೂ.2.5 ಕೋಟಿ ಮೊತ್ತದ ಆಸ್ಪತ್ರೆ, ಆಯುರ್ವೇದಿಕ್ ಕಾಲೇಜ್, ಡಿಟಿಜಿಸಿ, ಕೋಲ್ಡ್ಸ್ಟೋರೇಜ್, ಶಾಲಾ-ಕಾಲೇಜುಗಳ ಆರಂಭ, ಮೂರು ಸಾವಿರ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಇದೆಲ್ಲ ನಿಮ್ಮ ಆಶೀರ್ವಾದದಿಂದ ಆಗಿದೆ. ನಿಮ್ಮ ಸೇವೆ ಮಾಡುವೆ. ನಾನು ಬೆಂಗಳೂರಿನಲ್ಲಿದ್ದರೂ ಸದಾಕಾಲ ಶಿಗ್ಗಾಂವ ಕ್ಷೇತ್ರದ ಜನತೆ ಬಗ್ಗೆ ಚಿಂತನೆ ಮಾಡುತ್ತೇನೆ. 15 ವರ್ಷಗಳ ಹಿಂದೆ ಆರಂಭಿಸಲಾದ ಅಭಿವೃದ್ಧಿ ಇಂದು ಉತ್ತುಂಗಕ್ಕೆ ಬರುತ್ತಿದೆ. ಸುಮಾರು 70 ರಿಂದ80ಕೋಟಿ ಮೊತ್ತದ ರಸ್ತೆ ನಿರ್ಮಾಣ ಮಾಡಲಾಗಿದೆ. ಮೂರ್ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಬೆಳೆವಿಮೆ ಬಂದಿಲ್ಲ. ಅದನ್ನು ಮರು ಸಮೀಕ್ಷೆ ಮಾಡಿ ನೀಡಲು ಆದೇಶಿಸಲಾಗಿದೆ ಎಂದರು.
ಹಾವೇರಿಯಲ್ಲಿ ಇಂಡಸ್ಟ್ರೀ ಟೌನ್ ಸಿಪ್ ಮಾಡಲಾಗುತ್ತಿದೆ. ಒಂದು ಸಾವಿರ ಎಕರೆ ಗುರುತಿಸಲಾಗಿದೆ. ಧಾರವಾಡ, ದಾವಣಗೆರೆ, ಹಾಗೂ ಚಿತ್ರದುರ್ಗದಲ್ಲಿಯೂ ಸಹ ಕೈಗಾರಿಕಾ ಟೌನ್ಶಿಪ್ ಮಾಡಲಾಗುತ್ತಿದೆ ಎಂದರು.