ನವದೆಹಲಿ : ಕಂಪನಿಗಳ ನೋಂದಾಯಿತ ವಿಳಾಸಗಳ ಭೌತಿಕ ಪರಿಶೀಲನೆಯ ಸಮಯದಲ್ಲಿ ಪಾರದರ್ಶಕ ಪ್ರಕ್ರಿಯೆ ಕಾಪಾಡಲು ಕೇಂದ್ರ ಸರ್ಕಾರ ನಿಯಮಗಳನ್ನ ತಿದ್ದುಪಡಿ ಮಾಡಿದೆ. ಈಗ ನೋಂದಾಯಿತ ಕಂಪನಿ ಕಚೇರಿಯ ಛಾಯಾಚಿತ್ರ ಮತ್ತು ಸ್ವತಂತ್ರ ಸಾಕ್ಷಿಗಳ ಉಪಸ್ಥಿತಿಯ ವಿಧಾನವನ್ನ ಪರಿಶೀಲನೆಯ ಸಮಯದಲ್ಲಿ ಅಳವಡಿಸಿಕೊಳ್ಳಲಾಗುತ್ತೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ಉದ್ದೇಶಕ್ಕಾಗಿ ಕಂಪನಿಗಳ ಕಾಯಿದೆ, 2014ರ ಅಡಿಯಲ್ಲಿ ಸೂಚಿಸಲಾದ ಪರಿಶೀಲನಾ ನಿಯಮಗಳನ್ನ ಮಾರ್ಪಡಿಸಿದೆ. ಇನ್ನು ಅಧಿಕೃತ ಗೆಜೆಟ್ನಲ್ಲಿ ಅಧಿಸೂಚನೆಯಾದ ತಕ್ಷಣ ಜಾರಿಗೆ ಬರಲಿದೆ. ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ, ಕಂಪನಿಯು ಸರಿಯಾದ ರೀತಿಯಲ್ಲಿ ವ್ಯವಹಾರ ನಡೆಸುತ್ತಿಲ್ಲ ಎಂದು ಕಂಪನಿಗಳ ರಿಜಿಸ್ಟ್ರಾರ್ ಅಭಿಪ್ರಾಯಪಟ್ಟರೇ, ಅವ್ರು ಅದರ ನೋಂದಾಯಿತ ವಿಳಾಸದ ಭೌತಿಕ ಪರಿಶೀಲನೆಯನ್ನ ಮಾಡಬಹುದು. ಈ ತಿದ್ದುಪಡಿಯೊಂದಿಗೆ, ಅಂತಹ ಭೌತಿಕ ಪರಿಶೀಲನೆಯ ಪ್ರಕ್ರಿಯೆಯನ್ನ ಸೂಚಿಸಲಾಗಿದೆ.
ಕಂಪನಿಗಳ ನೋಂದಾಯಿತ ವಿಳಾಸಗಳ ಭೌತಿಕ ಪರಿಶೀಲನೆ ಮಾಡುವಾಗ ಸ್ಥಳೀಯ ಮಟ್ಟದಲ್ಲಿ ಇಬ್ಬರು ಸ್ವತಂತ್ರ ಸಾಕ್ಷಿಗಳ ಉಪಸ್ಥಿತಿಯು ಅಗತ್ಯವಾಗಿರುತ್ತದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ. ಅಗತ್ಯವಿದ್ರೆ, ಸ್ಥಳೀಯ ಪೊಲೀಸರ ಸಹಾಯವನ್ನೂ ಪಡೆಯಬಹುದು. ಕಂಪನಿಯ ನೋಂದಣಿ ಸಮಯದಲ್ಲಿ ನೀಡಿದ ವಿಳಾಸಕ್ಕೆ ಲಗತ್ತಿಸಲಾದ ಕಟ್ಟಡದ ದಾಖಲೆಗಳನ್ನ ಪರಿಶೀಲಿಸುವುದು ಸಹ ಅಗತ್ಯವಾಗಿರುತ್ತದೆ. ಇದಲ್ಲದೇ, ಆ ನೋಂದಾಯಿತ ವಿಳಾಸದೊಂದಿಗೆ ಸ್ಥಳದ ಭಾವಚಿತ್ರವನ್ನ ಸಹ ತೆಗೆದುಕೊಳ್ಳಲಾಗುತ್ತದೆ.
ಈ ಪರಿಶೀಲನೆ ಪೂರ್ಣಗೊಂಡ ನಂತ್ರ ಸಂಬಂಧಿತ ಮಾಹಿತಿಯೊಂದಿಗೆ ವಿವರವಾದ ವರದಿಯನ್ನ ಸಿದ್ಧಪಡಿಸಲಾಗುತ್ತದೆ. ಭೌತಿಕ ಪರಿಶೀಲನೆಯ ಸಮಯದಲ್ಲಿ, ನೋಂದಾಯಿತ ವಿಳಾಸದಲ್ಲಿ ಸಂವಹನ ಮಾಡಲು ಸಾಧ್ಯವಿಲ್ಲ ಎಂದು ಕಂಡುಬಂದ್ರೆ, ಸಂಬಂಧಿತ ರಿಜಿಸ್ಟ್ರಾರ್ ಕಂಪನಿ ಮತ್ತು ಅದರ ನಿರ್ದೇಶಕರಿಗೆ ತಿಳಿಸುವಂತೆ ನೋಟಿಸ್ ಕಳುಹಿಸುತ್ತಾರೆ. ಕಂಪನಿಯಿಂದ ಬರುವ ಉತ್ತರದ ಆಧಾರದ ಮೇಲೆ, ಆ ಕಂಪನಿಯ ಹೆಸರನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಕಂಪನಿಗಳ ಕಾಯಿದೆ 2014ರಲ್ಲಿ ತಿದ್ದುಪಡಿಯ ಮೂಲಕ ಈ ಪರಿಣಾಮದ ನಿಬಂಧನೆಯನ್ನ ಮಾಡಲಾಗಿದೆ.