ಬೆಂಗಳೂರು: ರಾಜ್ಯ ಸರ್ಕಾರದಿಂದ 2022-23ನೇ ಸಾಲಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಪರಿಷ್ಕೃತ ದರದಲ್ಲಿ ಇನ್ ಪುಟ್ ಸಬ್ಸಿಡಿ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿಗೆ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ರಾಜ್ಯದಲ್ಲಿ 2022ನೇ ಸಾಲಿನ ಮುಂಗಾರು ರುತುವಿನಲ್ಲಿ ಬಿದ್ದಂತ ಭಾರೀ ಮಳೆಯಿಂದ ಹಾಗೂ ನದಿ ಹರಿವಿನಿಂದ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿದ್ದು, ಇದರಿಂದ ಜನ-ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಂದ ವರದಿಯಾಗಿರುತ್ತದೆ.
ಈ ಹಿನ್ನಲೆಯಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ನೀಡಿರುವ ಪರಿಹಾರದಂತೆ ಬೆಳೆ ಹಾನಿಯಾದ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲು ಇನ್ ಪುಟ್ ಸಬ್ಸಿಡಿ ಮೊತ್ತವನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ.
ಹೀಗಿದೆ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಪರಿಷ್ಕೃತ ಇನ್ ಪುಟ್ ಸಬ್ಸಿಡಿ ದರ
- ಮಳೆಯಾತ್ರಿತ – ರೂ.6,800 ದರವನ್ನು ರೂ.13,600ಕ್ಕೆ ಹೆಚ್ಚಿಸಿ ಆದೇಶಿಸಿದೆ
- ನೀರಾವರಿ – ರೂ.13,500 ಹಾನಿಯ ಪರಿಹಾರವನ್ನು ರೂ.25,000ಕ್ಕೆ ಹೆಚ್ಚಿಸಿದೆ
- ಬಹುವಾರ್ಷಿಕ – ರೂ.18,000 ಹಣವನ್ನು, ರೂ.28,000ಕ್ಕೆ ಹೆಚ್ಚಿಸಲಾಗಿದೆ.
ಅಂದಹಾಗೇ 2022ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಪ್ರವಾಹದಿಂದಾಗುವ ಬೆಳೆ ಹಾನಿಗೆ ಇನ್ ಪುಟ್ ಸಬ್ಸಿಡಿಯನ್ನು ಪ್ರತಿ ರೈತರಿಗೆ ಗರಿಷ್ಟ 2 ಹೆಕ್ಟೇರ್ ಗೆ ಸೀಮಿತಗೊಳಿಸಿದೆ.