ಬೆಂಗಳೂರು: ವಿಶ್ವದಾದ್ಯಂತ ಕೊರೋನಾ ಬಳಿಕ, ಈಗ ಮಂಕಿಪಾಕ್ಸ್ ಸೋಂಕು ( Monkeypox Case ) ಆರ್ಭಟಿಸುತ್ತಿದೆ. ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆಯಾದ ನಂತ್ರ, ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿ ಸೋಂಕಿ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ. ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಮಂಕಿಪಾಕ್ಸ್ ಸರ್ವೇಕ್ಷಣೆಗಾಗಿ ಹೆಚ್ಚಿನ ಮಟ್ಟದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಈ ಕೆಳಕಂಡ ಮಾರ್ಗಸೂಚಿ ಕ್ರಮಗಳನ್ನು ಕೂಡಲೇ ಕೈಗೊಂಡಿರುವುದನ್ನು ಖಚಿತ ಪಡಿಸಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ.
ಇನ್ನೂ ಹೆಚ್ಚಿನ ಸರ್ವೇಕ್ಷಣೆಯನ್ನು ಜಿಲ್ಲೆಗಳು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿ, ಈ ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ.
- ಮಂಕಿಪಾಕ್ಸ್ ಪ್ರತಿಯೊಂದು ಪ್ರಕರಣವನ್ನು ವರದಿಯಾಡುವುದು
- ತ್ವರಿತ ಪ್ರಕ್ರಿಯಾತಂಡದ ವಿವರವಾದ ತನಿಖೆ, ಮಾದರಿ ಸಂಗ್ರಹ ಮತ್ತು ಐಹೆಚ್ಐಪಿ ಪೋರ್ಟಲ್ ನಲ್ಲಿ ವರದಿ ಮಾಡಿದ ನಂತ್ರ ರಾಜ್ಯಕ್ಕೆ ವರದಿ ಮಾಡತಕ್ಕದ್ದು
- ಪ್ರಕರಣ ವರದಿ ಮಾಡುವ ಪ್ರಪತ್ರವನ್ನು ಸಂಪೂರ್ಣ ಭರ್ತಿ ಮಾಡಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು.
- ಶಂಕಿತ ಹಾಗೂ ಖಚಿತಪಟ್ಟ ಪ್ರಕರಣಗಳಿಗಾಗಿ ನಿರ್ಧಿಷ್ಟ ಸಾಂಸ್ಥಿಕ ಪ್ರತ್ಯೇಕತೆ ಸೌಲಭ್ಯವಿರುವುದನ್ನು ಖಚಿತ ಪಡಿಸಿಕೊಳ್ಳುವುದು.
- ಎಲ್ಲಾ ಶಂಕಿತ ಪ್ರಕರಣಗಳ ಸಂಪರ್ಕಿತರ ಪತ್ತೆಯನ್ನು ಕಡ್ಡಾಯವಾಗಿ ಕೈಗೊಳ್ಳುವುದು.
- ಸಂಪರ್ಕಿತರನ್ನು ಲಕ್ಷಣಗಳು, ಚಿನ್ಹೆಗಳು ಕಂಡು ಬರುವವೆ ಎಂದು 21 ದಿನಗಳವರೆಗೆ ಮೇಲ್ವಿಚಾರಣೆ ಮಾಡುವುದು.
- ಮಂಕಿಪಾಕ್ಸ್ ನ ಲಕ್ಷಣಗಳು, ಚಿನ್ಹೆಗಳು ಕಂಡು ಬಂದರೇ, ಕೂಡಲೇ ಪರೀಕ್ಷೆಗೊಳಪಡಿಸುವುದು ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಶಾಲೆಗೆ ಕಳುಹಿಸಿಕೊಡುವುದು.
ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಮಾಹಿತಿಯನ್ನು ಇ-ಮೇಲ್ ಮೂಲಕ ಕಳಿಸಲಾಗಿದೆ. ಎಲ್ಲಾ ಜಿಲ್ಲೆಯವರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ