ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಆಕ್ಟೋಬರ್ 25ರ ಮಂಗಳವಾರದಂದು ಸೂರ್ಯಗ್ರಹಣ ಆವರಿಸಲಿರುವ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಆಗಲಿದ್ದು, ಭಕ್ತರು ಸಹಕರಿಸಬೇಕಾಗಿ ಕೋರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರದಂದು ಮಧ್ಯಾಹ್ನದವರೆಗೆ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿದ್ದು, ನಂತರ ಮಧ್ಯಾಹ್ನ 2:30ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 2:30ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸೂರ್ಯ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನ ಎಂದಿನಂತೆ ದೇವಸ್ಥಾನದಲ್ಲಿ ಅನ್ನ ಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಬಿಡುವವರೆಗೆ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಸ್ಥಾನದಲ್ಲಿ ಜಪಮಾಡಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ.
ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ. ಅಕ್ಟೋಬರ್ 25ರಂದು ದೇವಸ್ಥಾನ ಇಡೀ ದಿನ ಬಾಗಿಲು ಮುಚ್ಚಲಿದೆ. ಆ ದಿನ ಯಾವುದೇ ಸೇವೆಗಳು, ಭೋಜನ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 26ರ ಬೆಳಗ್ಗೆ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂಜಾ ಸೇವೆಗಳು, ದೇವರ ದರ್ಶನ ಆರಂಭಗೊಳ್ಳಲಿದೆ.