ನವದೆಹಲಿ : ಸ್ನ್ಯಾಪ್ ಚಾಟ್ʼನ ಮಾತೃಸಂಸ್ಥೆಯಾದ Snap, ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನ ತೆಗೆದುಹಾಕಲಾಗುವುದು. ಆದಾಗ್ಯೂ, ಈ ವಜಾ ಯಾವಾಗ ನಡೆಯುತ್ತದೆ ಮತ್ತು ಎಷ್ಟು ಜನರನ್ನ ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂಬುದರ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಇಲ್ಲ ಎಂದು ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ. ಅಂದ್ಹಾಗೆ Snap, ಸುಮಾರು 6,000 ಉದ್ಯೋಗಿಗಳನ್ನ ಹೊಂದಿದೆ.
ವರದಿಯ ಬಗ್ಗೆ ರಾಯಿಟರ್ಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸ್ನ್ಯಾಪ್ಚಾಟ್ ನಿರಾಕರಿಸಿದೆ. ಕೆಲಸದಿಂದ ತೆಗೆದುಹಾಕಲು ತಯಾರಿ ನಡೆಸುತ್ತಿರುವ ಕಂಪನಿಗಳ ಪಟ್ಟಿಯಲ್ಲಿ Snap ಮಾತ್ರವಿಲ್ಲ, ಈ ಪಟ್ಟಿಯಲ್ಲಿ ಅನೇಕ ದೊಡ್ಡ ತಂತ್ರಜ್ಞಾನ ಕಂಪನಿಗಳು, ಕ್ರಿಪ್ಟೋ ವಿನಿಮಯ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳು ಸಹ ಇವೆ. ಅನೇಕ ದೊಡ್ಡ ಕಂಪನಿಗಳು ಈ ವರ್ಷ ಹೊಸ ನೇಮಕಾತಿಗಳನ್ನು ಕಡಿಮೆ ಮಾಡುವುದಾಗಿ ಹೇಳಿವೆ.
ಫೇಸ್ಬುಕ್ ಒಡೆತನದ ಮೆಟಾ ಈ ವರ್ಷ ಎಂಜಿನಿಯರ್ಗಳ ನೇಮಕಾತಿಯನ್ನ ಕನಿಷ್ಠ 30 ಪ್ರತಿಶತದಷ್ಟು ಕಡಿತಗೊಳಿಸಿದೆ. ಈ ಮಾಹಿತಿಯನ್ನ ಈ ವರ್ಷದ ಜೂನ್ನಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಸ್ವತಃ ನೀಡಿದ್ದರು. ಅದ್ರಂತೆ, ಅವರು ತಮ್ಮ ಉದ್ಯೋಗಿಗಳಿಗೆ ದೊಡ್ಡ ಆರ್ಥಿಕ ಕುಸಿತಕ್ಕೆ ಸಿದ್ಧರಾಗಿರುವಂತೆ ಎಚ್ಚರಿಕೆ ನೀಡಿದ್ದರು.
ಈ ವರ್ಷದ ಹೊಸ ಉದ್ಯೋಗಗಳನ್ನ ಕಂಪನಿ ಕಡಿಮೆ ಮಾಡಲಿದೆ ಎಂದು ಸ್ನ್ಯಾಪ್ ಸಿಇಒ ಇವಾನ್ ಸ್ಪೀಗೆಲ್ ಮೇ ತಿಂಗಳಲ್ಲಿ ಉದ್ಯೋಗಿಗಳಿಗೆ ಮೆಮೊದಲ್ಲಿ ತಿಳಿಸಿದ್ದರು. ದುರ್ಬಲ ಆರ್ಥಿಕತೆಯ ಪರಿಣಾಮಗಳ ಬಗ್ಗೆ ಅವ್ರು ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಂಪನಿಯ ಷೇರುಗಳು ಸಹ ಶೇಕಡಾ 25ರಷ್ಟು ಕುಸಿತವನ್ನ ಕಂಡಿವೆ. ವರದಿಯ ಪ್ರಕಾರ, ಕಂಪನಿಯು ಅನೇಕ ರಂಗಗಳಲ್ಲಿ ನಷ್ಟವನ್ನ ಎದುರಿಸುತ್ತಿದೆ.
ಕಂಪನಿಯ ಆದಾಯವು ನಿರೀಕ್ಷೆಗಿಂತ ಶೇಕಡಾ 13ರಷ್ಟು ಹೆಚ್ಚಾಗಿದ್ದರೂ, ಇತ್ತೀಚೆಗೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ಸ್ನ್ಯಾಪ್ ನಷ್ಟವು ಸುಮಾರು ಮೂರು ಪಟ್ಟು (ಸುಮಾರು 3,371 ಕೋಟಿ ರೂ.)ಗೆ ತಲುಪಿದೆ. ಆದಾಗ್ಯೂ ಕಂಪನಿಯು ತನ್ನ ಹೂಡಿಕೆದಾರರಿಗೆ ಬರೆದ ಪತ್ರದಲ್ಲಿ ಫಲಿತಾಂಶದಿಂದ ಸಂತೋಷವಾಗಿಲ್ಲ ಎಂದು ಹೇಳಿದೆ.