ಬೆಂಗಳೂರು : ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಹಸ್ಯವಾಗಿ ಭೇಟಿಯಾಗಿದ್ದಾರೆ ಎನ್ನುವ ವಿಚಾರದ ಕುರಿತು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನಿಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಜೊತೆಗೆ ವೈಯಕ್ತಿಕ ಕೆಲಸಗಳೂ ಇರುತ್ತೆ. ಖಾಸಗಿ ಕೆಲಸ ನಿಮಿತ್ತ ಬಾಗಲಕೋಟೆಗೆ ಭೇಟಿ ನೀಡಿದ್ದು ನಿಜ. ರಸ್ತೆ ಬದಿ ಕಾರು ನಿಲ್ಲಿಸಿ ಬಾಳೆಹಣ್ಣು, ಬಿಸ್ಕತ್ ತಿನ್ನುತ್ತಿದೆ. ಯಾರೋ ಯುವಕ ಬಂದು ನನ್ನ ಜೊತೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಫೋಟೋ ತೆಗೆದುಕೊಂಡು ಹೋದ. ನಾನು ವೈಯಕ್ತಿಕ ಕೆಲಸಕ್ಕಾಗಿ ಓಡಾಡಬಾರದು ಅಂತಾ ಇದೆಯಾ ? ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಬೆಳಗಾವಿಯಿಂದ ನೇರವಾಗಿ ಬಾದಾಮಿ ತಾಲೂಕಿನ ಕೆರೂರಿಗೆ ಬಂದಿದ್ದ ಡಿ.ಕೆ.ಶಿವಕುಮಾರ್ ಅವರು ಪಟ್ಟಣದಲ್ಲಿ ಬೀದಿಬದಿಯಲ್ಲಿ ಕೆಲ ಯುವಕರನ್ನು ಮಾತನಾಡಿಸಿ ಹೋಗಿದ್ದಾರೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದವು ಎನ್ನಲಾದ ಕೆಲ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಕೆಶಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿ ಯಾರಿಗೂ ಮಾಹಿತಿ ನೀಡದೇ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.