ತುಮಕೂರು: ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು, ಈ ಮೂಲಕ ಮತ್ತೆ ತುಮಕೂರು ವಿವಿ ವಿವಾದದ ಕೇಂದ್ರ ಬಿಂದುವಾಗಿದೆ. ತುಮಕೂರು ವಿವಿ ಸ್ಥಾಪನೆಯಾದ ಆರಂಭದಿಂದಲೂ ಕೂಡ ಅನವಶ್ಯಕ ಕೆಲಸಗಳಿಂದಲೇ ವಿವಾದಗಳನ್ನು ಮೈಗೂಡಿಸಿಕೊಂಡು ಬರುತ್ತಿದ್ದು, ಈಗ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಿದೆ ಅಂತ ಸ್ಥಳೀಯ ಪ್ರಗತಪರರು ಕುಲಪತಿ ಪ್ರೊ ಎಂ ವೆಂಕಟೇಶ್ವರಲು ವಿರುದ್ದ ಕಿಡಿಕಾರುತ್ತಿದ್ದಾರೆ.
ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಪೀಠವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠವನ್ನು ಸ್ಥಾಪಿಸುವ ಕುರಿತು ಸಿಂಡಿಕೇಟ್ ಸದಸ್ಯ ಟಿ ಡಿ ವಿನಯ್ ಮನವಿ ಸಲ್ಲಿಸಿದ್ದರು ಎನ್ನಲಾಗಿದ್ದು, ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಒಮ್ಮತದ ನಿರ್ಧಾರವನ್ನು ಮಾಡಿ, ಪೀಠ ರಚನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇನ್ನೂ ಇದೇ ವೇಳೆ ಸಿಂಡಿಕೇಟ್ ಸದಸ್ಯ ಟಿ ಡಿ ವಿನಯ್ ಕುಲಪತಿ ಪ್ರೊ ಎಂ ವೆಂಕಟೇಶ್ವರಲು ಅವರಿಗೆ 1 ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದು, ಪೀಠ ರಚನೆಗೆ ಮುತುವರ್ಜಿ ವಹಿಸಿದ್ದಾರೆ ಅಂತ ತಿಳಿದು ಬಂದಿದೆ.