ಕಲಬುರಗಿ : ರಾಜ್ಯ ಸರ್ಕಾರವು ಆ್ಯಸಿಡ್ ಸಂತ್ರಸ್ತರಿಗೆ 10 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದ್ದು, ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮ ವಾಸ್ತವ್ಯ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾಸಿಡ್ ಸಂತ್ರಸ್ತರಿಗೆ ಈ ಹಿಂದೆ 3 ಸಾವಿರ ರೂ. ಪಿಂಚಣಿ ಕೊಡಲಾಗುತಿತ್ತು, ಅದನ್ನು ಈಗ 10 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದೆ. ಇದಲ್ಲದೆ ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಸ್ವಯಂ ಉದ್ಯೋಗ ಮಾಡಲು ಸಂತ್ರಸ್ತರು ಮುಂದೇ ಬಂದಲ್ಲಿ 5 ಲಕ್ಷ ರೂ. ವರೆಗೆ ಧನಸಹಾಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು.