ಧಾರವಾಡ : ತೋಟಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಅಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಗರಿಷ್ಟ 2 ಹೆಕ್ಟೇರ್ ವರೆಗೆ ಶೇ 90 ರಷ್ಟು ಸಹಾಯಧನ ನೀಡಲಾಗುವುದು.ಇತರೆ ರೈತರಿಗೆ 2 ಹೆಕ್ಟೇರ್ ವರೆಗೆ ಶೇ.75 ರಷ್ಟು ಸಹಾಯಧನ ನೀಡಲಾಗುವುದು. ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸಹಾಯಧನ ನೀಡಲಾಗುವುದು. ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೂ ಶೇ.45 ರಷ್ಟು ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ರೈತರಾಗಿದ್ದಲ್ಲಿ ಕಂದಾಯ ಇಲಾಖೆಯಿಂದ ಆರ್ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ಮೊದಲು ತಾಲೂಕಾ ತೋಟಗಾರಿಕೆ ಕಛೇರಿಯಲ್ಲಿ ಹೆಸರು ನೊಂದಾಯಿಸಿ ಕಾರ್ಯಾದೇಶ ಪಡೆಯತಕ್ಕದ್ದು, ಕಾರ್ಯಾದೇಶ ಪಡೆಯದೇ ಅಳವಡಿಸಿಕೊಂಡಲ್ಲಿ ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.