ರಾಮನಗರ : ಮಳೆ ಹಾನಿ ವೀಕ್ಷಣೆಗೆ ರಾಮನಗರಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಮಳೆಯಿಂದ ಆಗಿರುವ ಸಮಸ್ಯೆಗಳಿಗೆ ಒಂದು ವಾರದೊಳಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.
ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಮನಗರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 600 ಎಕರೆ ಕೃಷಿ ಬೆಳೆ, 500 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. ಇನ್ನು153 ಮನೆಗಳಿಗೆ ಹಾನಿಯಾಗಿದ್ದು, 3,830 ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಪೂರ್ಣವಾಗದಿರುವುದರಿಂದ ರಸ್ತೆಯಲ್ಲಿ ಮಳೆ ನೀರು ನಿಂತಿದೆ. ಹಾಗಾಗಿ ಎಲ್ಲಾ ಕಾಲುವೆಗಳನ್ನ ತೆಗೆಯುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಇನ್ನು “ಮನೆಗಳಿಗೆ ನೀರು ನುಗ್ಗಿರುವುದರಿಂದ ಜನಜೀವನಕ್ಕೆ ತೊಂದರೆಯಾಗಿದೆ. ಮನೆ, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ ಒಂದು ವಾರದಲ್ಲಿ ಪರಿಹಾರ ಕೊಡುತ್ತೇವೆ, ಉಚಿತ ರೇಷನ್ ನೀಡುತ್ತೇವೆ. ಮಳೆಯಿಂದ ಆಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತೇವೆ” ಎಂದರು.