ಬೆಂಗಳೂರು : ರಾಜ್ಯದಲ್ಲಿ ಮುಂಗಾರಿನ ಅಬ್ಬರ ಕ್ಷೀಣಗೊಂಡಿದ್ದು, ಮುಂದಿನ ನಾಲ್ಕೈದು ದಿನ ರಾಜ್ಯಾದ್ಯಂತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಚಳಿಗಾಲದ ಮುನ್ಸೂಚನೆಯಲ್ಲಿ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ. ಕಳೆದ ವಾರ ರಾಜ್ಯದಲ್ಲಿ ಮೋಡದ ವಾತಾವರಣ ಕಂಡು ಬಂದಿತ್ತು. ರಾಜ್ಯದ ಹಲವೆಡೆ ಮಳೆಯಾಗಿತ್ತು. ಆ ಸಂದರ್ಭದಲ್ಲಿ ಚಳಿ ವಾಡಿಕೆಗಿಂತ ಕೊಂಚ ಕಡಿಮೆಯೇ ಇತ್ತು. ಇದೀಗ ರಾಜ್ಯದಲ್ಲಿ ಒಣಹವೆ ಮುಂದುವರೆಯಲ್ಲಿದ್ದು ಚಳಿಯ ಪ್ರಮಾಣವೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೀದರ್, ವಿಜಯಪುರ, ಕಲಬುರಗಿ, ಮಂಡ್ಯ, ಕೊಡಗು ಜಿಲ್ಲೆಯ ಹಲವಡೆ ಚಳಿ ಮುಂದುವರೆಯಲಿದೆ.