ಕೊಪ್ಪಳ : ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ತುಂಗಭದ್ರಾ ನದಿಗೆ ಬಿಡುಗಡೆ ಮಾಡಿರುವುದರಿಂದ ಗಂಗಾವತಿ ತಾಲ್ಲೂಕು ಕಂಪ್ಲಿ ಸೇತುವೆಯ ಮೇಲೆ ನೀರಿನ ಪ್ರಮಾಣ ಹೆಚ್ಚಳವಾದ ಪರಿಣಾಮ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿ ಕೊಪ್ಪಳ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿ ಬಸವಣಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಜು.13 ರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವವರೆಗೆ ಹಾಗೂ ಮುಂದಿನ ಆದೇಶದವರೆಗೆ ಗಂಗಾವತಿ ತಾಲ್ಲೂಕು ಲಿಂಗಸೂರು-ಕುಡಿತಿನಿ ರಾಜ್ಯ ಹೆದ್ದಾರಿ-29 ರಸ್ತೆ ಕಿ.ಮೀ 83.00 ಮಾರ್ಗಮಧ್ಯ ಇರುವ ಕಂಪ್ಲಿ ಸೇತುವೆ ಮೇಲೆ ಸಾರ್ವಜನಿಕರು ಹಾಗೂ ವಾಹನ ಸಂಚಾರವನ್ನು ನಿಷೇಧಿಸಿದೆ. ನೀರಿನ ಹರಿವು ಕಡಿಮೆಯಾಗುವವರೆಗೆ ವಾಹನಗಳು ಕಡೇಬಾಗಿಲು-ಬುಕ್ಕಸಾಗರ ಸೇತುವೆ ಮೂಲಕ ಮಾರ್ಗಪಲ್ಲಟ ಮಾಡಿ ಸಂಚರಿಸಬೇಕು ಎಂದು ಉಪವಿಭಾಗಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.