ನವದೆಹಲಿ : 5ಜಿ ಟೆಲಿಕಾಂ ಸೇವೆಯು ದೇಶದ ಶಿಕ್ಷಣ ವ್ಯವಸ್ಥೆಯನ್ನ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಯಾಕಂದ್ರೆ, ಇತ್ತೀಚಿನ ತಂತ್ರಜ್ಞಾನವು “ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು” ಮೀರಿ ಹೋಗುತ್ತದೆ” ಎಂದರು.
ಹೊಸ ಶಿಕ್ಷಣ ನೀತಿ (NEP) ದೇಶವನ್ನ ಇಂಗ್ಲಿಷ್ ಭಾಷೆಯ ಸುತ್ತಲಿನ “ಗುಲಾಮ ಮನಸ್ಥಿತಿ“ಯಿಂದ ಹೊರತರುತ್ತದೆ ಎಂದು ಅವರು ಪ್ರತಿಪಾದಿಸಿದರು.
ಗಾಂಧಿನಗರ ಜಿಲ್ಲೆಯ ಅದಾಲಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಉಪಕ್ರಮಕ್ಕೆ ಚಾಲನೆ ನೀಡಿದ ನಂತರ ಪ್ರಧಾನಿ ಮಾತನಾಡುತ್ತಿದ್ದರು.
ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದ್ದರೂ ಇಂಗ್ಲಿಷ್ ಜ್ಞಾನವನ್ನ ಬೌದ್ಧಿಕತೆಯ ಗುರುತಾಗಿ ಪರಿಗಣಿಸಲಾಗಿದೆ ಎಂದು ಅವರು ಗಮನಸೆಳೆದರು.
ಈ ಮಿಷನ್ ಗುಜರಾತ್’ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ರೂಮ್ ಗಳು, ಕಂಪ್ಯೂಟರ್ ಲ್ಯಾಬ್ ಗಳು ಮತ್ತು ರಾಜ್ಯದ ಶಾಲೆಗಳ ಮೂಲಸೌಕರ್ಯಗಳ ಒಟ್ಟಾರೆ ಉನ್ನತೀಕರಣವನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
“ಇತ್ತೀಚೆಗೆ ಪ್ರಾರಂಭಿಸಲಾದ 5 ಜಿ ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನ ಮೀರಿ ಹೋಗುತ್ತದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ” ಎಂದು ಪ್ರಧಾನಿ ಹೇಳಿದರು.
ವಿದ್ಯಾರ್ಥಿಗಳು ಈಗ 5ಜಿ ಸೇವೆಯ ಸಹಾಯದಿಂದ ವರ್ಚುವಲ್ ರಿಯಾಲಿಟಿ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತಮ್ಮ ಶಾಲೆಗಳಲ್ಲಿ ಅನುಭವಿಸಬಹುದು ಎಂದು ಅವರು ಹೇಳಿದರು.
ಇಂಗ್ಲಿಷ್ ಬಗ್ಗೆ ಅನಾನುಕೂಲವಾಗಿರುವವರು ಹಿಂದೆ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸ್ಥಳೀಯ ಭಾಷೆಗಳ ಬಳಕೆಯನ್ನ ಪ್ರಧಾನಿ ಪ್ರತಿಪಾದಿಸಿದರು.