ಬೆಂಗಳೂರು : ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ ಮಾಡುವಂತೆ ಆಗ್ರಹಿಸಿ ನಾಳೆ ಕಬ್ಬು ಬೆಳೆಗಾರರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ನಾಳೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ ಮಾಡುವಂತೆ ಆಗ್ರಹಿಸಿ ನಾಳೆ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಹೆದ್ದಾರಿಗಳನ್ನು ತಡೆಯಲಾಗುವುದು. ಸರ್ಕಾರ ಈ ಪ್ರತಿಭಟನೆ ಜಗ್ಗದೇ ಹೋದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಮೂವತ್ತು ಲಕ್ಷ ಕಬ್ಬು ಬೆಳೆಗಾರರ ಪರವಾಗಿ ನಾಳೆ ಹೋರಾಟ ನಡೆಯುತ್ತಿದೆ. ಸರ್ಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಕಬ್ಬಿನ ಬೆಲೆ ಏರಿಕೆ ಮಾಡಬೇಕೆಂದು ಒತ್ತಾಯಿಸಿ ಹೆದ್ದಾರಿ ಬಂದ್ ನಡೆಸಲಾಗುವುದು ತಿಳಿಸಿದ್ದಾರೆ.