ನವದೆಹಲಿ : ಭಾರತ ಸರ್ಕಾರವು 2023ರ ಗಣರಾಜ್ಯೋತ್ಸವ ಪರೇಡ್ ಸ್ತಬ್ಧಚಿತ್ರಗಳಿಗಾಗಿ ಮೂರು ನಿರ್ದಿಷ್ಟ ವಿಷಯಗಳನ್ನ ಪ್ರಸ್ತಾಪಿಸಿದೆ. ‘India@75’, ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಮತ್ತು ‘ನಾರಿ ಶಕ್ತಿ’ ಈ ಥೀಮ್ಗಳಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜನವರಿ 26, 2023ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನ ಆಹ್ವಾನಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಮೂರು ವಿಷಯಗಳಲ್ಲಿ ಯಾವುದಾದರೂ ಒಂದನ್ನ ಅಥವಾ ಮೂರರ ಸಂಯೋಜನೆಯನ್ನ ಆಯ್ಕೆ ಮಾಡುವ ಸ್ತಬ್ಧಚಿತ್ರಗಳನ್ನ ರಚಿಸಲು ಕೇಳಲಾಗಿದೆ.
ಆಗಸ್ಟ್ 15, 2022ರಂದು ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನ ಪೂರೈಸಿತು. ಇದನ್ನು ಆಚರಿಸುವ ಸಲುವಾಗಿ, ‘India@75’ ಸ್ತಬ್ಧಚಿತ್ರವು ಕಳೆದ ಏಳು ದಶಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ, ರಾಷ್ಟ್ರದ ಸಾಧನೆಗಳು, ಕ್ರಿಯೆಗಳು ಮತ್ತು ನಿರ್ಣಯಗಳನ್ನ ಒಳಗೊಂಡಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಇನ್ನು 2021ರಲ್ಲಿ, ಭಾರತವು 2023ನ್ನ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (IYOM) ಎಂದು ಘೋಷಿಸಲು ವಿಶ್ವಸಂಸ್ಥೆಗೆ ಪ್ರಸ್ತಾಪಿಸಿತು. ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂಬ ಧ್ಯೇಯವಾಕ್ಯವನ್ನು ಪರಿಚಯಿಸಲು ಇದೇ ಕಾರಣ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಸ್ತಾಪಕ್ಕೆ 27 ದೇಶಗಳಿಂದ ಬೆಂಬಲ ದೊರೆತಿದೆ. ಇದರ ಪರಿಣಾಮವಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) 2023ನ್ನ ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿತು.
ಈ ಸಂದರ್ಭವನ್ನು ಗುರುತಿಸುವ ಸಲುವಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೋರ್ ಕಮಿಟಿಯನ್ನ ರಚಿಸಿದೆ. ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೂರೈಕೆಯನ್ನ ಉತ್ತೇಜಿಸುವ ನೀತಿಗಳ ತಳಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಆರು ಕಾರ್ಯಪಡೆಗಳನ್ನ ರಚಿಸಿದೆ ಎಂದು ವರದಿ ತಿಳಿಸಿದೆ.
ಸೆಪ್ಟೆಂಬರ್ 30ರೊಳಗೆ, ಸಂಬಂಧಪಟ್ಟ ಇಲಾಖೆಗಳು ತಮ್ಮ ಪ್ರಸ್ತಾವನೆಗಳನ್ನ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಬೇಕು, ಉತ್ತಮ ಪರಿಕಲ್ಪನೆಯ ಪ್ರಸ್ತಾಪಗಳು ಮತ್ತು ಸಂಕ್ಷಿಪ್ತ ಬರಹಗಳೊಂದಿಗೆ ಎಂದು ವರದಿ ತಿಳಿಸಿದೆ.
ಅತ್ಯುತ್ತಮ ಪ್ರಸ್ತಾವನೆಗಳನ್ನ ಶಾರ್ಟ್-ಲಿಸ್ಟ್ ಮಾಡಲು ಸಹಾಯ ಮಾಡಲು ಕೇಂದ್ರ ರಕ್ಷಣಾ ಸಚಿವಾಲಯವು ಕಲೆಯ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳ ಸಮಿತಿಯನ್ನ ರಚಿಸಿದೆ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.