ಮಂಡ್ಯ : ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಡ್ಯ ಜಿಲ್ಲೆಯ ಇಬ್ಬರು ಹಾಲಿ ಶಾಸಕರು, ಓರ್ವ ಮಾಜಿ ಶಾಸಕ ಸೇರಿದಂತೆ 24 ಜನರಿಗೆ ಸಂಕಷ್ಟ ಎದುರಾಗಿದೆ.
ಕೋರ್ಟ್ನಲ್ಲಿ ವ್ಯತಿರಿಕ್ತವಾಗಿ ತೀರ್ಪು ಬಂದರೆ ಮೂವರು ಪ್ರಮುಖ ರಾಜಕಾರಿಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಳ್ಳುವ ಜೊತೆಗೆ ರಾಜಕೀಯ ಜೀವನಕ್ಕೆ ಕಂಟಕ ಎದುರಾಗಲಿದೆ. 5 ಕೋಟಿ ಹಣ ದುರ್ಬಳಕೆ ಪ್ರಕರಣದಲ್ಲಿ ಶಿಕ್ಷೆಯಾದ ಬೆನ್ನಲ್ಲೇ ನಿವೇಶನ ಹಗರಣ ಆರೋಪಿಗಳಲ್ಲಿ ನಡುಕ ಶುರುವಾಗಿದೆ. ಸೆಪ್ಟೆಂಬರ್ 9ರಂದು ಮೂಡಾ ಹಣ ದುರ್ಬಳಕೆ ಪ್ರಕರಣದಲ್ಲಿ ಐವರಿಗೆ ಶಿಕ್ಷೆಯಾಗಿದೆ. ಐವರಿಗೆ 7 ವರ್ಷ ಜೈಲು, ತಲಾ 1 ಕೋಟಿ ದಂಡವಿಧಿಸಿ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ.
ಇದೀಗ ಮೂಡಾದ ಮತ್ತೊಂದು ಪ್ರಕರಣದ ಮೇಲೆ ಮಂಡ್ಯ ಜನರ ಚಿತ್ತ. 107 ನಿವೇಶನ ಹಗರಣದಲ್ಲಿ ಶಿಕ್ಷೆಯಾದ್ರೆ ಮೂವರ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಲಿದೆ. ಹಗರಣದ ತೀರ್ಪಿನ ಮೇಲೆ ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ರಾಜಕೀಯ ಭವಿಷ್ಯ ನಿಂತಿದೆ. 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾದ್ರೆ ಚುನಾವಣಾ ಸ್ಪರ್ಧೆ ಅಸಾಧ್ಯ. ಈಗಾಗಲೇ ತನಿಖೆ ನಡೆಸಿ ದೋಷಾರೋಪ ಪಟ್ಪಿ ಸಲ್ಲಿಸಿರುವ ಸಿಬಿಐ. ಸೆಪ್ಟೆಂಬರ್ 15ರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಚುನಾವಣೆಯೊಳಗೆ ವಿಚಾರಣೆ ಮುಗಿದು ಶಿಕ್ಷೆಯಾದ್ರೆ ಮಂಡ್ಯ ರಾಜಕೀಯ ವಲಯದಲ್ಲೇ ದೊಡ್ಡ ಬದಲಾವಣೆಯಾಗಲಿದೆ ಎನ್ನಲಾಗಿದೆ.