ಬೆಂಗಳೂರು: ಕಂದಾಯ ಇಲಾಖೆ ಸಾರ್ವಜನಿಕರಿಂದ ಎಲ್ಲಾ ಹಂತದಲ್ಲೂ ಅತಿಹೆಚ್ಚು ಅವಲಂಭನೆ ಹೊಂದಿದ ಇಲಾಖೆಯಾಗಿದ್ದು, ನೌಕರರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿವಿಮಾತು ಹೇಳಿದರು.
ಬುಧವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1,000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿಯೊಂದು ಮನೆಗೂ ಸಂಪರ್ಕವಿರುವ ಏಕೈಕ ಇಲಾಖೆ ಕಂದಾಯ ಇಲಾಖೆ. ಜಾತಿ-ಆದಾಯ ಪ್ರಮಾಣ ಪತ್ರದಿಂದ ಜಮೀನು ದಾಖಲೆ, ಮಾರಾಟ- ಖರೀದಿವರೆಗೆ ನೇರ ಅಥವಾ ಪರೋಕ್ಷವಾಗಿ ಜನ ಸಾಮಾನ್ಯರು ಕಂದಾಯ ಇಲಾಖೆಯನ್ನು ಅವಲಂಭಿಸಿರುತ್ತಾರೆ. ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾಗಿದ್ದು, ನೌಕರರೂ ಸಹ ಜನರಿಗೆ ಮಾತೃ ಹೃದಯದಿಂದಲೇ ಸ್ಪಂದಿಸಬೇಕು. ಎಷ್ಟೇ ಕೆಲಸದ ಒತ್ತಡ ಇದ್ದರೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು” ಎಂದು ಅಭಿಪ್ರಾಯಪಟ್ಟರು.
ಮುಂದುವರೆದು, ದೇಶದಲ್ಲಿ ಯಾರೂ ಊಹೆ ಮಾಡುವ ಮೊದಲೇ ನಾವು ಭವಿಷ್ಯದ ಬಗ್ಗೆ ಆಲೋಚಿಸಿ ಭೂಮಿ ಯೋಜನೆ ಅಡಿಯಲ್ಲಿ ಗಣಕೀಕೃತ ಪಹಣಿ ಮಾಡಿದ್ದೇವೆ. ಕಂದಾಯ ಇಲಾಖೆಯನ್ನು ಹಂತಹಂತವಾಗಿ ಸಂಪೂರ್ಣ ಆಧುನೀಕರಣಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 3.90 ಕೋಟಿ ಜಮೀನುದಾರರಿದ್ದು, 1.80 ಕೋಟಿ ಸರ್ವೇ ನಂಬರ್ ಇವೆ. 70 ರಿಂದ 1 ಕೋಟಿವರೆಗೆ ಹೊಸ ಸರ್ವೇ ನಂಬರ್ ಸೃಷ್ಟಿಸುವ ಅಗತ್ಯವಿದೆ. ಲಕ್ಷಾಂತರ ಜನರಿಗೆ ಜಮೀನು ಮಂಜೂರು ಮಾಡಿದ್ದೇವೆ. ಆದರೆ, ದರ್ಖಾಸ್ತು ಸರ್ವೇ ಮಾಡಿಕೊಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ರೀತಿಯ ಇಲಾಖೆಯ ಕೆಲಸಗಳೇ ಸಾಕಷ್ಟಿವೆ. ಕಂದಾಯ ಇಲಾಖೆಯಲ್ಲಿ ಎಷ್ಟು ಮಾಡಿದರೂ ಕೆಲಸ ಮುಗಿಯದು. ಆದರೂ, ಜನರ ಪರವಾಗಿ ಕೆಲಸ ಮಾಡಬೇಕಾದ ಕರ್ತವ್ಯವೂ ನಮ್ಮ ಮೇಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮದಲ್ಲೂ ಕಂದಾಯ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ ಎಂಬ ಬಗ್ಗೆಯೇ ಸಾಕಷ್ಟು ದೂರುಗಳು ದಾಖಲಾಗುತ್ತಿವೆ. ಇಲಾಖೆ ಕೆಲಸಗಳು ಹೊರತಾಗಿಯೂ ಜನರ ಸಮಸ್ಯೆ ಪರಿಹಾರ ಮಾಡುವ ಕೆಲಸವೇ ಹೆಚ್ಚಾಗಿ ಇರುವುದರಿಂದ ನಮಗೆ ನಿರ್ದಿಷ್ಟ ಯೋಜನೆ ಬದಲಾಗಬೇಕಿದೆ. ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ನಾವು ಅವರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಿದೆ ಎಂದರು.
ಸರ್ವೇ ಕೆಲಸಗಳಿಗೆ ಮೊದಲ ಆದ್ಯತೆ!
ರಾಜ್ಯದಲ್ಲಿ 1890 ರಲ್ಲಿ ಬ್ರಿಟೀಷರ ಕಾಲದಲ್ಲಿ ಕೊನೆಯ ಬಾರಿ ಸರ್ವೇ ಕೆಲಸ ಆಗಿತ್ತು. ಆದರೆ, ತದನಂತರ ಸರ್ವೇ ಕೆಲಸ ಆಗಿಲ್ಲ. ಇದೀಗ ರಾಜ್ಯಾದ್ಯಂತ ಮರು-ಸರ್ವೇ ಕೆಲಸ ಆರಂಭಿಸಿದ್ದೇವೆ. ಈಗಾಗಲೇ 21 ತಾಲೂಕುಗಳಲ್ಲಿ ಮರು-ಸರ್ವೇ ಕೆಲಸ ಚಾಲ್ತಿಯಲ್ಲಿದೆ. ಸರ್ವೇ ಕೆಲಸ ಸಂಪೂರ್ಣವಾಗಿ ಮುಗಿದು ಮಾಹಿತಿಗಳು ಡಿಜಿಟಲೀಕರಣಗೊಳ್ಳದೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಅದಕ್ಕೆ ಮಾನವ ಸಂಪನ್ಮೂಲದ ಅಗತ್ಯವೂ ಇದೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದಾಗ ಕೂಡಲೇ ಅವರು 1000 ಜನ ಪರವಾನಗಿ ಭೂಮಾಪಕರ ನೇಮಕಾತಿಗೆ ಒಪ್ಪಿಗೆ ಸೂಚಿಸಿದರು. ಇದಲ್ಲದೆ, 364 ಸರ್ಕಾರಿ ಭೂ ಮಾಪಕರು ಹಾಗೂ 27 ಜನ ಎಡಿಎಲ್‌ಆರ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಮುಗಿದು ಎಲ್ಲಾ ಭೂ ಮಾಪಕರೂ ಕಾರ್ಯೋನ್ಮುಖರಾಗಲಿದ್ದಾರೆ.
ಇದರ ಜೊತೆಗೆ ಸರ್ವೇ ಇಲಾಖೆಯಲ್ಲಿ 541 ನೇರ ನೇಮಕಾತಿ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗೂ ಕಳೆದ ಎರಡು ತಿಂಗಳಿನಿಂದ ಚರ್ಚಿಸಿ ಮುಖ್ಯಮಂತ್ರಿಗಳಿಂದ ಹಾಗೂ ಹಣಕಾಸು ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದೆ. ಒಟ್ಟಾಗಿ ಸರ್ವೇ ಇಲಾಖೆಗೆ ಹೆಚ್ಚುವರಿ 2500 ನೌಕರರು ನೇಮಕವಾದಂತಾಗುತ್ತದೆ ಎಲ್ಲರೂ ಒಟ್ಟಾಗಿ ಸರ್ವೇ ಕೆಲಸಗಳನ್ನು ಮುಗಿಸಬೇಕಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸರ್ವೇ ಕೆಲಸಕ್ಕೆ ರೋವರ್ ಬಳಕೆ:
ಕೆಲವು ಸರ್ವೇ ನಂಬರ್‌ಗಳಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ರೈತರ ಹೆಸರೂ ಇರುತ್ತದೆ. ಜಂಟಿ ಸರ್ವೇ ನಡೆಸಿ ಎಲ್ಲರಿಗೂ ನೂತನ ಹಿಸ್ಸಾ ನಂಬರ್ ನೀಡದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲ. ಹೀಗಾಗಿ ಸರ್ವೇ ಕೆಲಸಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕಿಗೂ ರೋವರ್‌ಗಳನ್ನು ನೀಡಲಾತ್ತಿದೆ. ಪ್ರತಿ ತಾಲೂಕಿಗೆ ಮೂರು ರೋವರ್‌ಗಳನ್ನು ನೀಡಲು ಟೆಂಡೆರ್ ಕರೆತಯಲಾಗಿದೆ ಎಂದರು.
ಮೊಘಲರ ಕಾಲದಲ್ಲಿ ಚೈನ್‌ನಲ್ಲಿ ಭೂ ಅಳತೆ ಮಾಡಲಾಗುತ್ತಿತ್ತು. ಈಗಲೂ ಅದೇ ಪದ್ದತಿ ಅನುಸರಿಸುವುದು ತರವಲ್ಲ. 18-19ನೇ ಶತಮಾನದ ರೀತಿ ಕೆಲಸ ಮಾಡಿದರೆ ಎಷ್ಟೇ ಸಿಬ್ಬಂದಿ ಇದ್ದರೂ ಸಾಲದು. ಈಗಾಗಿ ಎಲ್ಲರೂ 21ನೇ ಶತಮಾನದ ಎಲ್ಲಾ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡಬೇಕು. ಅದೇ ಕಾರಣಕ್ಕೆ ಸರ್ವೇ ಕೆಲಸದಲ್ಲಿ ರೋವರ್ ಬಳಕೆಯನ್ನು ಅಳವಡಿಸಲಾಗಿದೆ ಎಂದರು.
ರೋವರ್ ಸರ್ವೇ ಮೂಲಕ ಕೆಲಸದ ವೇಗ ಮೂರರಿಂದ ಐದು ಪಟ್ಟು ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿ ಒಂದೇ ದಿನಕ್ಕೆ ಐದಕ್ಕೂ ಹೆಚ್ಚು ಸರ್ವೇ ನಡೆಸಬಹುದು. ಅಲ್ಲದೆ, ಸರ್ವೇ ಸಹಾಯದಿಂದ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಆಖಾರ್ ಬಂದ್‌ಗಳನ್ನೂ ಡಿಜಿಟಲೀಕರಣಗೊಳಿಸಲಾಗುವುದು. ಕಾಲಂ 3-9 ವಿಸ್ತೀರ್ಣ ಹೊಂದಾಣಿಕೆ ಬಗೆಹರಿಸಿ ಹೊಸ ಸರ್ವೇ ನಂಬರ್ ನೀಡಲಾಗುವುದು. ಈ ಕೆಲಸ ಮಾಡಲೇಬೇಕು, ಜನರಿಗೆ ನೆಮ್ಮದಿ ನೀಡಲೇಬೇಕು ಎಂದು ಅವರು ತಿಳಿಸಿದರು.
ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಯೋಜನೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಕಾರ್ಯಕ್ರಮ ಫೆ.01 ರಿಂದಲೇ ಶುರುವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ 31 ತಾಲೂಕುಗಳ ಭೂ ದಾಖಲೆಗಳನ್ನು ಡಿಜಿಟಲೀರಣಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ತಹಶೀಲ್ದಾರ್, ನಾಡ ಕಚೇರಿ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿರುವ ಭೂ ದಾಖಲೆಗಳನ್ನೂ ಡಿಜಿಟಲೀಕರಿಸಿ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ಆ ಮೂಲಕ ಸರ್ಕಾರಿ ಕಚೇರಿಗಳಿಗೆ ಅವರ ಅನಗತ್ಯ ಓಡಾಡಕ್ಕೆ ಪೂರ್ಣ ವಿರಾಮ ಇಡುವುದು ಈ ಯೋಜನೆಯ ಉದ್ದೇಶ. ಈ ಯೋಜನೆ ಈಗಾಗಲೇ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ರಾಜ್ಯದ್ಯಂತ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದರು.
ಪಹಣಿಗಳಿಗೆ ಆಧಾರ್ ಜೋಡಣೆ:
ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಸಂಬಂಧ ನಮ್ಮ ಗ್ರಾಮಾಧಿಕಾರಿಗಳು 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಈ ಪೈಕಿ 10 ಲಕ್ಷ ರೈತರ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಅದರಲ್ಲಿ 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದಂತೆ ಅದರ ಖಾತೆದಾರರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳು ಇದ್ದರೆ ದುರಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಆಧಾರ್ ಜೋಡಣೆ ಮಾಡುವುದರಿಂದ ಯಾರದ್ದೋ ಆಸ್ತಿ ಮತ್ತಾರೋ ನೋಂದಣಿ ಮಾಡಿಸಿಕೊಳ್ಳುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹದು ಎಂದು ಹೇಳಿದರು.
ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಸಹ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗಿ ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತದನಂತರ ನೋಂದಣಿ ಮಾಡಿದರೆ ಒಂದಷ್ಟು ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಆಧಾರ್ ಜೋಡಣೆಯ ಅಗತ್ಯತೆಯನ್ನು ವಿವರಿಸಿದರು.
ಲೋಕಸಭಾ ಚುನಾವಣೆ ಘೋಷಣೆಯಾದರೂ ಸಹ ಅದರ ಮಧ್ಯೆಯೂ ಆಧಾರ್ ಜೋಡಣೆ ಕಾರ್ಯ ಮಾಡಬೇಕು ಎಂದು ಗ್ರಾಮಾಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ಗ್ರಾಮಾಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಈ ಆಫೀಸ್ ಬಳಕೆಗೆ ಒತ್ತು!:
ಕಂದಾಯ ಇಲಾಖೆಯ ಕೆಲ ಹಂತದ ಕಂದಾಯ ನಿರೀಕ್ಷಕರು-ಗ್ರಾಮ ಲೆಕ್ಕಿಗರೂ ಸಹ ಇ-ಆಫೀಸ್ ಬಳಕೆ ಮಾಡಬೇಕು. ಆಗ ಮಾತ್ರ ಜನರಿಗೆ ಕಾಗದ ರಹಿತ ಪಾರದರ್ಶಕ ಸೇವೆ ನೀಡಲು ಸಾಧ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಇಲಾಖೆಯ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂಬ ನಿಟ್ಟಿನಲ್ಲಿ ಇಂದು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೂ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಕಡತ ವಿಲೇವಾರಿ ಆನ್‌ಲೈನ್‌ನಲ್ಲಿ ಸಾಧ್ಯವಾದಷ್ಟು ವೇಗಗೊಳಿಸಬೇಕು. ಜನಪರ ಆಡಳಿತ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ರಿಜ್ವಾನ್ ಅರ್ಷದ್ ಅವರು, “ಸಚಿವ ಕೃಷ್ಣ ಬೈರೇಗೌಡ ಅವರು ಕ್ರಾಂತಿಕಾರಿ ಮನೋಭಾವನೆ ಇಟ್ಟುಕೊಂಡೆ ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಂದಾಯ ಇಲಾಖೆ ಎಂದರೆ ಗೊಂದಲದ ಗೂಡು. ಸಣ್ಣ ಕೆಲಸ ಆಗಲೂ ಅಲೆದಾಡಬೇಕು ಎಂಬುದು ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಆದರೆ, ಅದನ್ನೆಲ್ಲ ಸರಿಮಾಡುವ ನಿಟ್ಟಿನಲ್ಲಿ ಕೃಷ್ಣ ಬೈರೇಗೌಡರು ಸಂಕಲ್ಪ ಮಾಡಿದ್ದಾರೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರಿದ್ದರೆ ಕೃಷ್ಣ ಬೈರೇಗೌಡ ಎಂದು ಅಭಿಪ್ರಾಯಪಟ್ಟರು.
ಪ್ರತಿ 30 ವರ್ಷಕ್ಕೊಮ್ಮೆ ರೀ-ಸರ್ವೇ ನಡೆಸಬೇಕು ಎಂಬುದು ನಿಯಮ. ಆದರೆ, ಒಂದು ಶತಮಾನದ ನಂತರ ಬ್ರಿಟಿಷರು ಬಿಟ್ಟುಹೋದ ಕೆಲಸ ಇದೀಗ ಕೃಷ್ಣ ಬೈರೇಗೌಡರ ಮೂಲಕ ಆಗುತ್ತಿದೆ ಎಂದರೆ ಇವರೂ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದೇ ಅರ್ಥ. ಇಲಾಖೆಯ ನೌಕರರಿಗೆ ಸರ್ಕಾರ ದೊಡ್ಡ ಶಕ್ತಿ ನೀಡಿದೆ. ಇದನ್ನು ಬಳಸಿಕೊಂಡು ಜಾತಿಧರ್ಮ ಭೇದ ಇಲ್ಲದೆ ಎಲ್ಲರೂ ಜನರಿಗೆ ನ್ಯಾಯ ನೀಡಿ. ಮನಸ್ಸಾಕ್ಷಿ ಯಿಂದ ಕೆಲಸ ಮಾಡಿ ಎಂದು ಅವರು ಕಿವಿಮಾತು ಹೇಳೀದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆಯ ಆಯುಕ್ತರಾದ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.