ಬೆಳಗಾವಿ : ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ಪೊಲೀಸರು ಶುಕ್ರವಾರ ಮತ್ತೆ ಮೂವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಆರೋಪಿಗಳಾದ ಅಕ್ಷಯ ದುಂಡಪ್ಪ ಭಂಡಾರಿ, ಬಸವರಾಜ ರುದ್ರಪ್ಪ ದುಂಡ್ನಾಟಿ, ಬೀರಂಗಡ್ಡಿ ಮತ್ತು ಶ್ರೀಧರ ಲಕ್ಕಪ್ಪ ಕಟ್ಟಿಕರ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 50 ಎಲೆಕ್ಟ್ರಾನಿಕ್ ಸಾಧನಗಳು, ಎರಡು ಮೊಬೈಲ್ ಫೋನ್ ಗಳು, ಒಂದು ಬೈಕ್ ಮತ್ತು 18 ಮಾರ್ಪಡಿಸಿದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಧನಗಳು ಸಿಮ್ ಕಾರ್ಡ್ ಗಳನ್ನು ಹೊಂದಿವೆ ಮತ್ತು ಪ್ರತ್ಯೇಕ ಇಯರ್ ಪೀಸ್ ಗಳೊಂದಿಗೆ ಕೆಲಸ ಮಾಡುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಕ್ಕೇರಿಯ ಶಿರಹಟ್ಟಿಯ ಕೇಂದ್ರದಲ್ಲಿ ದುಂಡ್ನಾಟಿ ಅಭ್ಯರ್ಥಿಗಳಿಗೆ ಉತ್ತರಗಳನ್ನು ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.