ದಾವಣಗೆರೆ : ಕೆಪಿಟಿಸಿಎಲ್ನ ಕಿರಿಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ಗಳ ನೇಮಕಾತಿಗೆ ಆಗಸ್ಟ್ 7 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ದಾವಣಗೆರೆಯಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ 11160 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದ್ದು ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈಗಾಗಲೇ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಯನ್ನು ಯಾವ ರೀತಿ ನಡೆಸಬೇಕೆಂದು ನಿಯಮಗಳನ್ನು ರೂಪಿಸಿದ್ದು ಅದರಂತೆ ಪರೀಕ್ಷಾ ಮೇಲ್ವಿಚಾರಕರು ಹಾಗೂ ಕೇಂದ್ರದ ಅಧೀಕ್ಷಕರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಸೇರಿದಂತೆ ಕೊಠಡಿ ಮೇಲ್ವಿಚಾರಕರು, ಅಧೀಕ್ಷಕರು, ಇತರೆ ಸಿಬ್ಬಂದಿ ಸೇರಿ ಯಾರಿಗೂ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಕೇಂದ್ರದ ಮುಖ್ಯಸ್ಥರಿಗೆ ಮಾತ್ರ ಕೀಪ್ಯಾಡ್ ಮೊಬೈಲ್ ಹೊಂದಲು ಅವಕಾಶ ಇದ್ದು ಕೇಂದ್ರದ ಸುತ್ತಮುತ್ತಲೂ ಜಾಮರ್ ಅಳವಡಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಬರುವಾಗ ಬಳಸುವ ಡ್ರೆಸ್ ಕೋಡ್ ಬಗ್ಗೆ ಪರೀಕ್ಷಾ ಸೂಚನಾ ಪತ್ರದಲ್ಲಿ ವಿವರಿಸಲಾಗಿದ್ದು ಅದರಂತೆ ಕ್ರಮ ವಹಿಸಲೇಬೇಕೆಂದರು.
ಅಭ್ಯರ್ಥಿಗಳು ವಾಚ್ ಕಟ್ಟುಕೊಂಡು ಬರುವಂತಿಲ್ಲ, ಮೆಟಾಲಿಕ್ ಸಲಕರಣೆ ಇರಬಾರದು ಹಾಗೂ ಯಾವುದೇ ತರಹದ ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ನಿಷಿದ್ದ ವಸ್ತುಗಳನ್ನು ತೆಗೆದುಕೊಂಡು ಬರಬಾರದು. ಎಲ್ಲಾ ಕೇಂದ್ರಗಳಲ್ಲಿ ವಾಲ್ ಕ್ಲಾಕ್ಗಳನ್ನು ಅಳವಡಿಸಬೇಕು ಮತ್ತು ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯವಿರುವ ಕಡೆ ವೀಡಿಯೋಗ್ರಾಫರ್ ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಇತರೆ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ ಮತ್ತು ಯಾವುದೇ ರೀತಿಯಲ್ಲಿಯು ಪರೀಕ್ಷಾ ಗೊಂದಲಕ್ಕೆ ಮತ್ತು ಅವ್ಯವಹಾರಕ್ಕೆ ಅವಕಾಶ ಇರುವುದಿಲ್ಲ. ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಹಾಗೂ ಸುಗಮವಾಗಿ ನಡೆಸಲು ಸೂಚನೆ ನೀಡಿದರು. ಕೆಇಎ ನೀಡಿರುವ ಮಾರ್ಗಸೂಚಿಯಲ್ಲಿ ಎಲ್ಲ ನಿಯಮಗಳ ವಿವರ ಇದ್ದು ಅದರಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಆಗಸ್ಟ್ 7 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿವಿಧ ಹುದ್ದೆಗಳ ಕನ್ನಡ ಭಾμÁ ಪರೀಕ್ಷೆಗಳು ದಾವಣಗೆರೆಯಲ್ಲಿ ಒಟ್ಟು 24 ಕೇಂದ್ರಗಳಲ್ಲಿ ನಡೆಯಲಿದೆ. ಬೆಳಗ್ಗೆ 10.30 ರಿಂದ ಮ.12.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ 1 ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಡಿ.ಆರ್.ಎಂ ವಿಜ್ಞಾನ ಪದವಿ ಪೂರ್ವ ಕಾಲೇಜ್, ಎ.ವಿ ಕಮಲಮ್ಮ ಮಹಿಳಾ ಪದವಿ ಪೂರ್ವ ಕಾಲೇಜ್, ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್, ಎ.ಆರ್.ಜಿ ಪದವಿಪೂರ್ವ ಕಾಲೇಜ್, ರಾಜನಹಳ್ಳಿ ಸಿದ್ದಮ್ಮ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀ ತರಳಬಾಳು ಜಗದ್ಗುರು ಸಂಯೋಜಿತ ಪದವಿ ಪೂರ್ವ ಕಾಲೇಜ್, ಎಸ್.ಎ.ಜಿ.ಬಿ ಸಂಯೋಜಿತ ಪದವಿ ಪೂರ್ವ ಕಾಲೇಜ್, ಎಸ್.ಎಸ್.ಆರ್.ಎಲ್.ಎಸ್ ಮಹಿಳಾ ಪಿಯು ಕಾಲೇಜ್, ಅಥಣಿ ಸಂಯೋಜಿತ ಪದವಿ ಪೂರ್ವ ಕಾಲೇಜ್, ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪಿಯು ಕಾಲೇಜ್, ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜ್, ಸೆಂಟ್ ಜಾನ್ಸ್ ಪಿಯು ಕಾಲೇಜ್, ಟಿ.ಎಂ.ಸಿ ಮತ್ತು ಟಿ.ಎಂ ಮೆಮೊ ಪಿಯು ಕಾಲೇಜ್, ಸೆಂಟ್ ಫಾಲ್ಸ್ ಪಿಯು ಕಾಲೇಜ್, ಎಂ.ಇ.ಎಸ್ ಪಿಯು ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಕಮಹಾದೇವಿ ಪ್ರೌಢಶಾಲೆ, ಮುದ್ದೆಗೌಡ್ರು ಮಲ್ಲಮ್ಮ ಮುರಿಗೆಪ್ಪ ಪ್ರೌಢಶಾಲೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಘಟಕ-1, ಘಟಕ-2, ಬಾಪೂಜಿ ಪಾಲಿಟೆಕ್ನಿಕ್, ಸರ್ಕಾರಿ (ಮಾಜಿ ಪುರಸಭೆ) ಪಿಯು ಕಾಲೇಜ್ ದಾವಣಗೆರೆ ಇಲ್ಲಿನ 24 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಸಮಾಜ ಕಲ್ಯಾಣ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಡಿಡಿಪಿಐ ತಿಪ್ಪೇಶಪ್ಪ, ಡಿಡಿಪಿಯು ಶಿವರಾಜು ಎಂ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.