ನವದೆಹಲಿ : ಇತ್ತೀಚಿನ ವರ್ಷಗಳಲ್ಲಿ ದೇಶೀಯ ಹಾಲು ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ವಾರ್ಷಿಕ ಹಾಲು ಉತ್ಪಾದನೆಯ ಬೆಳವಣಿಗೆಯು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.
2014ರಿಂದೀಚೆಗೆ ಭಾರತದ ಹೈನುಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನ ಹೆಚ್ಚಿಸಲು ಸರ್ಕಾರ ಅವಿರತವಾಗಿ ಶ್ರಮಿಸಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇದು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ, ಇದರಿಂದಾಗಿ ರೈತರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
“ಭಾರತವು 2014ರಲ್ಲಿ 146 ಮಿಲಿಯನ್ ಟನ್ ಹಾಲನ್ನು ಉತ್ಪಾದಿಸಿದೆ. ಇದು ಈಗ 120 ಮಿಲಿಯನ್ ಟನ್ʼಗಳಿಗೆ ಏರಿದೆ. ಅಂದರೆ, ಸುಮಾರು 44 ಪ್ರತಿಶತದಷ್ಟು ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಶೇಕಡಾ 2ರಷ್ಟು ಉತ್ಪಾದನಾ ಬೆಳವಣಿಗೆಗೆ ಹೋಲಿಸಿದರೆ, ಭಾರತವು ಹಾಲು ಉತ್ಪಾದನೆಯ ಬೆಳವಣಿಗೆಯ ದರವನ್ನು ಶೇಕಡಾ 6ಕ್ಕಿಂತ ಹೆಚ್ಚು ವೇಗದಲ್ಲಿ ಸಾಧಿಸುತ್ತಿದೆ” ಎಂದು ಪ್ರಧಾನಿ ಗಮನಸೆಳೆದರು.
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಸೆಂಟರ್ ಮತ್ತು ಮಾರ್ಟ್ʼನಲ್ಲಿ ಇಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಡೈರಿ ಫೆಡರೇಷನ್ ವರ್ಲ್ಡ್ ಡೈರಿ ಶೃಂಗಸಭೆ (IDF WDS) 2022ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಡೈರಿ ಜಗತ್ತಿನ ಎಲ್ಲ ಗಣ್ಯರು ಇಂದು ಭಾರತದಲ್ಲಿ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಇನ್ನು ವಿಶ್ವ ಡೈರಿ ಶೃಂಗಸಭೆಯು ವಿಚಾರಗಳ ವಿನಿಮಯಕ್ಕೆ ಉತ್ತಮ ಮಾಧ್ಯಮವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.